ಗೋದಾವರಿ ತೀರದಲಿ.. ತ್ರಯಂಬಕೇಶ್ವರನ ದಿವ್ಯದರ್ಶನ
ಸಹ್ಯಾದ್ರಿ ಪರ್ವತ ಶ್ರೇಣಿಯ ಬ್ರಹ್ಮಗಿರಿಯ ತಪ್ಪಲಲ್ಲಿರುವ ಈ ಪವಿತ್ರ ಸ್ಥಳಕ್ಕೆ ಗೌತಮ ಮುನಿ ತಪಸ್ಸನ್ನು ಆಚರಿಸಿದ್ದ ಹೆಗ್ಗಳಿಕೆಯೂ ಇದೆ. ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿರುವ ಈ ದೇಗುಲ ನಾಗರ ಶೈಲಿಯ ವಾಸ್ತುಶಿಲ್ಪದಿಂದ ಕಣ್ಮನ ಸೆಳೆಯುತ್ತದೆ. ಸುಮಾರು 1755 ರಿಂದ 1786ರ ಅವಧಿಯಲ್ಲಿ ಮೂರನೇ ಪೇಶ್ವೆ ಬಾಲಾಜಿ ಬಾಜಿರಾವ್ ನಿಂದ ನಿರ್ಮಾಣಗೊಂಡ ಈ ದೇಗುಲಕ್ಕೆ ಪರಮ ಪಾವನಿ ಗೋದಾವರಿ ನದಿಯಿಂದ ಮತ್ತಷ್ಟು ಆಕರ್ಷಣೆ ಮತ್ತು ಶೋಭೆ.
- ಕೆ. ಜಯಲಕ್ಷ್ಮಿ, ಮಡಿಕೇರಿ.
ಬ್ರಹ್ಮನೇ ಕೆತ್ತಿ ನಿಲ್ಲಿಸಿರುವ ಸುಂದರ ಬೆಟ್ಟಗಳ ಸಾಲು.. ಗೌತಮ ಮುನಿ ತಪಸ್ಸು ಮಾಡಿದ ಬ್ರಹ್ಮಗಿರಿಯ ತಪ್ಪಲು... ಇಲ್ಲಿದೆ ತ್ರಿಮುಖ ಜ್ಯೋತಿರ್ಲಿಂಗಗಳ ಒಡಲು... ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ತ್ರಯಂಬಕೇಶ್ವರನ ಮಡಿಲು.
" ಮೂರು ಮುಖದ ಶಿವಲಿಂಗ ಒಂದೇ ದೇಗುಲದಲ್ಲಿ "ಎನ್ನುವ ವೈಶಿಷ್ಟ್ಯವೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರೆಂಬಕ್ ನಲ್ಲಿರುವ ತ್ರಯಂಬಕೇಶ್ವರನ ದೇಗುಲ ದರ್ಶನಕ್ಕೆ ಮೂಲ ಪ್ರೇರಣೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಪ್ರಸಿದ್ಧವಾದ ತಾಣವಿದು. ಭಾರತದಲ್ಲಿರುವ ಪ್ರಸಿದ್ಧ 12 ಜ್ಯೋತಿರ್ಲಿಂಗಗಳ ಪೈಕಿ ನಾಸಿಕ್ ನ ತ್ರಯಂಬಕೇಶ್ವರ ಒಂದು. ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮುಖ ಜ್ಯೋತಿರ್ಲಿಂಗ ಇಲ್ಲಿನ ವಿಶೇಷ.

ಸಹ್ಯಾದ್ರಿ ಪರ್ವತ ಶ್ರೇಣಿಯ ಬ್ರಹ್ಮಗಿರಿಯ ತಪ್ಪಲಲ್ಲಿರುವ ಈ ಪವಿತ್ರ ಸ್ಥಳಕ್ಕೆ ಗೌತಮ ಮುನಿ ತಪಸ್ಸನ್ನು ಆಚರಿಸಿದ್ದ ಹೆಗ್ಗಳಿಕೆಯೂ ಇದೆ. ಕಪ್ಪು ಶಿಲೆಯಿಂದ ನಿರ್ಮಾಣಗೊಂಡಿರುವ ಈ ದೇಗುಲ ನಾಗರ ಶೈಲಿಯ ವಾಸ್ತುಶಿಲ್ಪದಿಂದ ಕಣ್ಮನ ಸೆಳೆಯುತ್ತದೆ. ಸುಮಾರು 1755 ರಿಂದ 1786ರ ಅವಧಿಯಲ್ಲಿ ಮೂರನೇ ಪೇಶ್ವೆ ಬಾಲಾಜಿ ಬಾಜಿರಾವ್ ನಿಂದ ನಿರ್ಮಾಣಗೊಂಡ ಈ ದೇಗುಲಕ್ಕೆ ಪರಮ ಪಾವನಿ ಗೋದಾವರಿ ನದಿಯಿಂದ ಮತ್ತಷ್ಟು ಆಕರ್ಷಣೆ ಮತ್ತು ಶೋಭೆ.
ಸದಾ ಶಂಖನಾದ ಮೊಳಗುತ್ತಿರುವ ಈ ದಿವ್ಯ ಸನ್ನಿಧಿಯಲ್ಲಿ ಹತ್ತು ಹಲವು ಪೂಜಾ ಕೈಂಕರ್ಯಗಳು ನಡೆಯುತ್ತಲೇ ಇರುತ್ತವೆ. ಕಾಳಸರ್ಪ ದೋಷ ನಿವಾರಣಾ ಪೂಜೆ , ಪಿತೃ ದೋಷ ನಿವಾರಣಾ ಪೂಜೆ, ಮಹಾ ಮೃತ್ಯುಂಜಯ ಜಪ, ತ್ರಿಪಿಂಡಿ ಶ್ರಾದ್ಧ ಪೂಜೆ, ನಾರಾಯಣ ನಾಗಬಲಿ ಪೂಜೆ.. ಹೀಗೆ ಇಲ್ಲಿ ನಡೆಯುವ ಹಲವು ಪೂಜೆಗಳು ನಮ್ಮನ್ನು ದೈವಿ ಲೋಕದಲ್ಲಿ ಮುಳುಗಿಸುತ್ತವೆ. ನಮ್ಮೊಳಗಿನ ಆಧ್ಯಾತ್ಮ ಭಾವವನ್ನು ಬಡಿದೆಬ್ಬಿಸುವ ಮಂತ್ರಘೋಷಗಳು , ಮನ ಪಾವನಗೊಳಿಸುವ ಜಪ ತಪಗಳು .. ನಿಜಕ್ಕೂ ಜೀವನ ಪಾವನಗೊಳಿಸುವ ಸಾರ್ಥಕ ಕ್ಷಣಗಳು!
ಭಾರತದ ಎರಡನೇ ಉದ್ದನೆಯ ನದಿ ' ದಕ್ಷಿಣದ ಗಂಗೆ' ಎಂದೇ ಪ್ರಸಿದ್ಧವಾಗಿರುವ ತಾಯಿ ಗೋದಾವರಿ ಈ ಪವಿತ್ರ ಕ್ಷೇತ್ರದಲ್ಲಿ ಸಂಭ್ರಮದಿಂದ ತುಂಬಿ ಹರಿಯುತ್ತಾಳೆ. ." ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ... ಎನ್ನುವ ಶ್ಲೋಕದಂತೆ ತನ್ನೊಡಲ ಪವಿತ್ರ ಜಲದಲ್ಲಿ ಸ್ನಾನ ಮಾಡುವ ಮನುಜರ ಪಾಪಗಳನ್ನು ತೊಳೆವ ಪರಮಶಕ್ತಿ ಶಾಲಿ ತಾನು ಎನ್ನುವ ಪರಮ ಪಾವನ ಭಾವನೆ ಒಂದೆಡೆಯಾದರೆ ತಾನು ಹರಿವ ಉದ್ದಗಲಕ್ಕೂ ಹತ್ತಿ ಭತ್ತ ಕಬ್ಬುಗಳ ಬೆಳೆ ಬೆಳೆಸಿ ಜನ ಜೀವನ ಪೋಷಿಸುತ್ತಿರುವ ಹೆಮ್ಮೆಯ ಕುವರಿ ತಾನೆಂಬ ಗಾಂಭೀರ್ಯದಿಂದ ಹರಿವ ಗೋದಾವರಿಯನ್ನು ನೋಡುವುದೇ ಕಣ್ಣಿಗೆ ಹಬ್ಬ!

ಈ ಧರ್ಮ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಹಿಂದೂ ಜನರು ಪ್ರವಾಹದಂತೆ ಹರಿದು ಬರುತ್ತಾರೆ. ಜ್ಯೋತಿರ್ಲಿಂಗದ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುವ ಭಕ್ತವೃಂದಕ್ಕೆ ಸರತಿಯ ಸಾಲಿನಲ್ಲಿ ನಿಂತು ದಣಿವಾಗದಂತೆ ದೇಗುಲದ ಆವರಣದುದ್ದಕ್ಕೂ ಆಸನಗಳನ್ನು ಕಾಯ್ದಿರಿಸಿದ್ದಾರೆ. " ಹರ ಹರ ಮಹಾದೇವಾ ... ಹರ ಹರ ಮಹಾದೇವಾ.. ಎನ್ನುವ ಘೋಷಣೆ ಕೂಗುತ್ತಾ ತ್ರಯಂಬಕೇಶ್ವರನ ದರ್ಶನದ ಭಾಗ್ಯದಲ್ಲಿ ಮಿಂದೆದ್ದ ಜನ ದೈವಸಮರ್ಪಿತ ಪತ್ರಪುಷ್ಪಗಳನ್ನು ಗೋದಾವರಿಯ ಒಡಲಲ್ಲಿ ತೇಲಿ ಬಿಟ್ಟು ಕೃತಾರ್ಥರಾದರೆ ತನ್ನಿರುವಿಕೆಯ ಸಾರ್ಥಕತೆಯಿಂದ ಜುಳುಜುಳು ನಾದಗೈಯುತ್ತಾ ಗೋದಾವರಿ ಹರಿಯುತ್ತಿದ್ದಾಳೆ.
ತ್ರಯಂಬಕೇಶ್ವರ ದೇಗುಲದಿಂದ ಎಂಟು ಕಿಮೀದೂರದಲ್ಲಿದೆ ಪಂಚವಟಿ. ನಾಸಿಕ್ ನಗರದಿಂದ 12 ಕಿಮೀ ಕ್ರಮಿಸಿ ಪಂಚವಟಿಯತ್ತ ಸಾಗುವಾಗ ಕತ್ತೆತ್ತಿ ಎತ್ತ ನೋಡಿದರೂ ರಾಮ ಸೀತೆ ಲಕ್ಷ್ಮಣ ಆಂಜನೇಯರೇ ಕಣ್ತುಂಬಿಕೊಳ್ಳುತ್ತಾರೆ. ಲಕ್ಷ್ಮಣನು ಶೂರ್ಪನಖಿಯ ನಾಸಿಕವನ್ನು (ಮೂಗನ್ನು ) ಕತ್ತರಿಸಿದ್ದರ ಸಂಕೇತವಾಗಿ ನಾಸಿಕ್ ಎಂಬ ಹೆಸರು ಬಂತು ಎಂಬ ಪ್ರತೀತಿ ಇರುವಂತೆ ಪಂಚವೃಕ್ಷಗಳಿಂದ ( ಬಿಲ್ವ, ನೆಲ್ಲಿ, ಅಶೋಕ, ಅಶ್ವತ್ಥ, ಆಲ ) ತುಂಬಿರುವುದರಿಂದ ಈ ಸ್ಥಳಕ್ಕೆ ಪಂಚವಟಿ ಎನ್ನುವ ಹೆಸರು ಬಂತು . ಕಾಲ ರಾಮ ದೇಗುಲ, ಪವಿತ್ರ ರಾಮಕುಂಡ, ಸೀತಾ ಗುಹೆ, ಕಪಾಲೇಶ್ವರ ದೇವಸ್ಥಾನ, ಗಂಗಾ ಗೋದಾವರಿ ದೇಗುಲ, ನೀಲಕಂಠೇಶ್ವರ ಮಂದಿರ, ಘೋರ ರಾಮ ಮಂದಿರ ಮೊದಲಾದ ಪೂಜಾ ಮಂದಿರಗಳನ್ನು ಇಲ್ಲಿ ನೋಡಬಹುದು. ಇಲ್ಲಿ ಹರಿಯುವ ಗೋದಾವರಿ ಮಾತೆ ತನ್ನ ತೀರದುದ್ದಕ್ಕೂ ನೂರಾರು ರೀತಿಯ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತಾ ಸಾವಿರಾರು ಜನರ ಉದರ ಪೋಷಣೆ ಮಾಡುತ್ತಿದ್ದಾಳೆ.
ಸುಂದರವಾದ ದೇವ ದೇವಿಯರ ಮಂದಿರಗಳು, ಕಲ್ಲು ಕಂಬಗಳು ಕೂಡ ಕೆತ್ತನೆಯ ಸೊಬಗಿನಿಂದ ಶೋಭಿಸುವ ಚಿತ್ರಣಗಳು ಪಂಚವಟಿಯನ್ನು ಎಂದೂ ಮರೆಯದೆ ಚಿತ್ತಭಿತ್ತಿಯಲ್ಲಿ ಸದಾ ಉಳಿಸುವ ಅಪೂರ್ವ ದೃಶ್ಯಗಳು.