- ವಿಜಯಸುತ


ಪ್ರತಿ ಮುಂಜಾನೆ ಕ್ಷಣಕ್ಷಣ ಬದಲಾಗುವ ಸೂರ್ಯನ ಸ್ಥಾನ ಮತ್ತು ಬದಲಾಗುವ ಸೂರ್ಯೋದಯದ ಹೊಂಗಿರಣ ನೋಡುವುದೇ ಕಣ್ಣಿಗೆ ಹಬ್ಬ. ಸೂರ್ಯೋದಯ ಹಾಗು ಸೂರ್ಯಾಸ್ತ ನೋಡುವುದೇ ಮನಸಿಗೆ ಆಹ್ಲಾದಕರ ಅನುಭವ. ಚಿತ್ರಕಾರನೊಬ್ಬ ತನ್ನ ಕುಂಚದಿಂದ ವಿವಿಧ ಬಣ್ಣ ಚಿತ್ತಾರಗಳ ಕಲಾಕೃತಿಯನ್ನು ಸೃಷ್ಟಿಸುವ ಹಾಗೆ ಬಾನಿನ ಅಂಗಳದಲ್ಲಿ ವಿಶಿಷ್ಟ ವಿನ್ಯಾಸ, ಹೊಳಪು ಝಳಪಿನೊಂದಿಗೆ ಮನವನ್ನು ಮೋಹಕತೆಯ ಪರವಶದಲ್ಲಿ ಬಿಗಿದು ಚುಂಬಕದಂತೆ ಸೆಳೆಯುತ್ತದೆ ಸೂರ್ಯನ ಉದಯ ಹಾಗು ಅಸ್ತಗಳು. ಸೂರ್ಯೋದಯ, ಸೂರ್ಯಾಸ್ತಗಳಿಗೆಂದೇ ಹೆಸರುವಾಸಿಯಾದ ಸಾಕಷ್ಟು ಸ್ಥಳಗಳನ್ನು ಭಾರತದಲ್ಲಿ ಕಾಣಬಹುದು. ಅದರಲ್ಲಿ ಒನ್ ಆಫ್ ದಿ ಬೆಸ್ಟ್ ಸ್ಪಾಟ್ ಕನ್ಯಾಕುಮಾರಿ. ಅಂಥ ಪ್ರಕೃತಿ ಕೊಡುಗೆಯನ್ನು ಕಣ್ತುಂಬಿಕೊಳ್ಳಲು ಕನ್ಯಾಕುಮಾರಿಗಿಂತ ಪರ್ಫೆಕ್ಟ್ ಸ್ಥಳ ಮತ್ತೊಂದಿಲ್ಲ.

ಭಾರತದ ಕಟ್ಟಕಡೆಯ ಸ್ಥಳವಾಗಿ ಕನ್ಯಾಕುಮಾರಿ ವಿಶೇಷ ಗುರುತನ್ನು ಹೊಂದಿದೆ. ಮೂರು ಸಮುದ್ರಗಳ ಸಂಗಮವಾಗುವ ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಅತ್ಯಂತ ಹೆಸರುವಾಸಿಯಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದರಿಂದಾಗಿ, ದೇಶ-ವಿದೇಶದ ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಬರುತ್ತಾರೆ.

kanyakumari island

ಕನ್ಯಾಕುಮಾರಿಗೆ ಶತಮಾನಗಳ ಇತಿಹಾಸವಿದೆ. ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರೇಬಿಯನ್ ಸಮುದ್ರ ಇಲ್ಲಿ ಸಂಧಿಸುವುದರಿಂದ ಇದು ಸುಪ್ರಸಿದ್ಧ ತಾಣವಾಗಿದೆ. ಇಲ್ಲಿ ಎಲ್ಲಾ ವರ್ಗದ ಜನರು ವಾಸಿಸುತ್ತಾರೆ. ಅಲ್ಲದೆ, ಪ್ರಸಿದ್ಧ ದೇವಾಲಯಗಳ ನೆಲೆಯಾಗಿರುವುದರಿಂದ ಅನೇಕ ಜನರು ಪ್ರತಿದಿನ ಕನ್ಯಾಕುಮಾರಿಗೆ ಭೇಟಿ ನೀಡುತ್ತಾರೆ. ಇದು ಭಾರತದ ಕೊನೆಯ ನಗರವಾಗಿರುವುದರಿಂದ, ಇದನ್ನು ಎಲ್ಲಿಂದಲಾದರೂ ಸುಲಭವಾಗಿ ತಲುಪಬಹುದು. ನೀವು ಫ್ಲೈಟ್ , ರೈಲು ಮತ್ತು ರಸ್ತೆಮಾರ್ಗಗಳ ಮೂಲಕ ಇಲ್ಲಿಗೆ ತಲುಪಬಹುದು. ನೀವು ವಿಮಾನದ ಮೂಲಕ ಕನ್ಯಾಕುಮಾರಿಯನ್ನು ತಲುಪಲು ಬಯಸಿದರೆ, ತಿರುವನಂತಪುರವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ, ನೀವು ಟ್ಯಾಕ್ಸಿ ಅಥವಾ ಬಸ್ ಮೂಲಕ ತಲುಪಬಹುದು.

ಇದು ಅಪರೂಪದ ಪ್ರವಾಸಿ ತಾಣವಾಗಿರುವುದರಿಂದ, ಪ್ರತಿದಿನ ನೂರಾರು ಪ್ರವಾಸಿಗರು ದೇಶದಾದ್ಯಂತ ಬರುತ್ತಾರೆ. ಆದರೆ, ಕನ್ಯಾಕುಮಾರಿಯಲ್ಲಿ ಏನು ನೋಡಬೇಕೆಂದು ಅನೇಕರಿಗೆ ತಿಳಿದಿಲ್ಲದಿರಬಹುದು. ಅಂಥ ಜನರಿಗೆ ಈ ಮಾಹಿತಿ ತಿಳಿದಿದ್ದರೆ, ಅವರು ತಮ್ಮ ಪ್ರವಾಸವನ್ನು ಅದ್ಭುತವಾಗಿ ಪೂರ್ಣಗೊಳಿಸಬಹುದು. ಆ ಭೇಟಿ ನೀಡುವ ಸ್ಥಳಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

Vivekananda rock memorial


ವಿವೇಕಾನಂದ ರಾಕ್ ಮೆಮೋರಿಯಲ್

ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಸ್ಮಾರಕವು ಹಿಂದೂ ಮಹಾಸಾಗರದ ತೀರದಲ್ಲಿರುವ ಒಂದು ಸಣ್ಣ ದ್ವೀಪದಂತಿದೆ. ಇದು ಕನ್ಯಾಕುಮಾರಿಯ ಪ್ರಮುಖ ಪ್ರವಾಸಿ ತಾಣವಾಗಿದೆ . 1892 ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿ ಜ್ಞಾನೋದಯ ಪಡೆದ ಸ್ಥಳವಾಗಿ ಇದು ಪ್ರಸಿದ್ಧವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಮಾರಕ ಬಂಡೆಯ ಮೇಲಿನ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡುವ ಮೂಲಕ ವಿಶೇಷ ಅನುಭವವನ್ನು ಪಡೆಯುತ್ತಾರೆ. ನೀವು ಯಾವುದೇ ದಿನ ಇಲ್ಲಿಗೆ ಹೋಗಬಹುದು. ಇದು ಸಮುದ್ರದ ನೀರಿನಲ್ಲಿರುವುದರಿಂದ, ನೀವು ದೋಣಿಯಲ್ಲಿ ಹೋಗಬೇಕು. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ದೋಣಿಗಳು ಲಭ್ಯವಿದೆ.

ತಿರವಳ್ಳೂರ್ ಪ್ರತಿಮೆ

ವಿವೇಕಾನಂದ ಶಿಲಾ ಸ್ಮಾರಕದ ಪಕ್ಕದಲ್ಲಿರುವ ಮತ್ತೊಂದು ಪ್ರವಾಸಿ ತಾಣವೆಂದರೆ ತಿರವಳ್ಳೂರ್ ಪ್ರತಿಮೆ. ಇದು ಕೂಡ ಒಂದು ಸಣ್ಣ ದ್ವೀಪದಲ್ಲಿದೆ. 133 ಅಡಿ ಎತ್ತರದ ಈ ಬೃಹತ್ ಪ್ರತಿಮೆ ತಮಿಳು ಕವಿ ಹಾಗು ತತ್ವಜ್ಞಾನಿಯಾದ ತಿರುವಳ್ಳೂರ್ ಎಂಬುವವರದು. ನೀವು ಇಲ್ಲಿಗೆ ದೋಣಿ ಮೂಲಕ ಹೋಗಬೇಕು. ನೀವು ವಿವೇಕಾನಂದ ಶಿಲಾ ಸ್ಮಾರಕ ಜತೆಗೆ ಈ ತಿರುವಳ್ಳೂರು ಪ್ರತಿಮೆಯನ್ನು ಅದೇ ಸಮಯದಲ್ಲಿ ನೋಡಬಹುದು. ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.

Tsunami memorial park


ಸುನಾಮಿ ಸ್ಮಾರಕ

ಡಿಸೆಂಬರ್ 26, 2004 ರಂದು ಅಪ್ಪಳಿಸಿದ ಸುನಾಮಿಯ ಬಗ್ಗೆ ಅನೇಕ ಜನರಿಗೆ ಈಗಾಗಲೇ ತಿಳಿದಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ಅವರ ನೆನಪಿಗಾಗಿ, ಈ ಸುನಾಮಿ ಗುರುತು ಸ್ಮಾರಕವನ್ನು ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ ನಿರ್ಮಿಸಲಾಗಿದೆ. ಸುಂದರವಾದ ಪಾರ್ಕ್‌ನಲ್ಲಿ ನಿರ್ಮಿಸಲಾದ ಈ ಸ್ಮಾರಕವು 16 ಅಡಿ ಎತ್ತರವಿದೆ. ಇದು ಒಂದು ಕೈಯಿಂದ ಸುನಾಮಿಯನ್ನು ನಿಲ್ಲಿಸಲು ಮತ್ತು ಇನ್ನೊಂದು ಕೈಯಿಂದ ಧೈರ್ಯದಿಂದ ಅದನ್ನು ಎದುರಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಈ ಸುನಾಮಿ ಗುರುತು ಸ್ಮಾರಕವು ವಿವೇಕಾನಂದ ಸ್ಮಾರಕದ ಹತ್ತಿರವೇ ಇದೆ. ಈ ಸುನಾಮಿ ಸ್ಮಾರಕ ಉದ್ಯಾನವನದ ಎದುರು ಭಗವತಿ ಅಮ್ಮನವರ ದೇವಾಲಯವೂ ಇದೆ. ನೀವು ಇಲ್ಲಿಗೂ ಸಹ ಭೇಟಿ ಮಾಡಬಹುದು.

Triveni sangam


ತ್ರಿವೇಣಿ ಸಂಗಮ

ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರ ಸಂಗಮವಾಗುವ ಸ್ಥಳ. ಇದರ ಅರ್ಥ ಮೂರು ಸಮುದ್ರಗಳು ಸಂಗಮಿಸುವ ಸ್ಥಳ. ಇದರಿಂದಾಗಿ, ದೇಶದೆಲ್ಲೆಡೆಯಿಂದ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದನ್ನು ಅಧ್ಯಾತ್ಮಿಕ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಅದ್ಭುತವಾಗಿ ಆಸ್ವಾದಿಸಬಹುದು. ಭಾರತದಲ್ಲಿನ ಈ ಸುಂದರ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ. ಒಂದು ಪದದಲ್ಲಿ ಹೇಳುವುದಾದರೆ ಇದು ಕಣ್ಣುಗಳಿಗೆ ಹಬ್ಬ.

ಗಾಂಧಿ ಮಂಟಪ

ಇದೇ ಸ್ಥಳದಲ್ಲಿ ನೋಡಲೇಬೇಕಾದ ಮತ್ತೊಂದು ಸ್ಥಳವೆಂದರೆ ಗಾಂಧಿ ಮಂಟಪ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅಂತ್ಯಕ್ರಿಯೆಯ ನಂತರ, ಅವರ ಚಿತಾಭಸ್ಮವನ್ನು ಕನ್ಯಾಕುಮಾರಿಗೆ ತಂದು ಸಮುದ್ರದಲ್ಲಿ ಬೆರೆಸಲಾಯಿತು. ನಂತರ, ಅವರ ಚಿತಾಭಸ್ಮವನ್ನು ಇರಿಸಲಾಗಿದ್ದ ಸ್ಥಳದಲ್ಲಿ ಗಾಂಧಿ ಮಂಟಪವನ್ನು ನಿರ್ಮಿಸಲಾಯಿತು. ಇದರೊಂದಿಗೆ, ಇದು ಕನ್ಯಾಕುಮಾರಿಯಲ್ಲಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ವಲ್ಪ ಸಮಯದವರೆಗೆ ಮೌನ ಆಚರಿಸಿ ಗಾಂಧಿಗೆ ಗೌರವ ಸಲ್ಲಿಸುತ್ತಾರೆ. ಈ ಮಂಟಪವನ್ನು ವಿಶೇಷ ಶೈಲಿಯಲ್ಲಿ ನಿರ್ಮಿಸಲಾಗಿದೆ, ಈ ಎಲ್ಲಾ ಸ್ಥಳಗಳು ಒಂದೇ ಪ್ರದೇಶದಲ್ಲಿರುವುದರಿಂದ, ನೀವು ಒಂದೇ ದಿನದಲ್ಲಿ ಎಲ್ಲವನ್ನೂ ನೋಡಬಹುದು.