ಸ್ಪಿಟಿ ಕಣಿವೆಯ ಕಟ್ಟಡಗಳಿಗೆ ಬಿಳಿ-ಹಳದಿ-ಕಂದು-ಕೆಂಪು ಬಣ್ಣಗಳೇಕೆ?
ಮಂಜು ಮುಸುಕಿದ ಸ್ಪಿಟಿ ಕಣಿವೆಯ ಮನೆ, ಮಠ, ಹೊಟೇಲ್ಗಳ ಗೋಡೆಗಳಲ್ಲಿ ಬಿಳಿ, ಹಳದಿ, ಕೆಂಪು, ಕಂದು ಬಣ್ಣಗಳೇ ಏಕೆ ಪ್ರಧಾನ? ಇದು ಕೇವಲ ಸೌಂದರ್ಯದ ಆಯ್ಕೆಯಲ್ಲ! ಹಿಮಾಲಯದ ಹವಾಮಾನ, ಸ್ಥಳೀಯ ಸಂಪನ್ಮೂಲಗಳು ಮತ್ತು ಟಿಬೆಟಿಯನ್ ಸಂಸ್ಕೃತಿಯ ಆಳವಾದ ಪ್ರಭಾವವೂ ಇದರ ಹಿಂದಿದೆ. ಸ್ಪಿಟಿಯ ಬಣ್ಣಗಳ ಲೋಕವನ್ನು ಗಮನಿಸಿದರೆ, ಅಲ್ಲಿನ ಪ್ರಕೃತಿ ಮತ್ತು ಪರಂಪರೆಯ ನಡುವಿನ ಸುಂದರ ಸಂಬಂಧವೂ ತೆರೆದುಕೊಳ್ಳುತ್ತದೆ.
'ಕಾಝಾ' ಎಂಬಲ್ಲಿ ನಾವು ತಂಗಿದ್ದ ಹೊಟೇಲ್ 'ಝಿವಾ ಲಿಂಗ್' ಅಚ್ಚುಕಟ್ಟಾಗಿತ್ತು, ಪ್ರತಿ ಕಿಟಿಕಿ ಬಾಗಿಲುಗಳಲ್ಲಿಯೂ ಮರದಿಂದ ಮಾಡಿದ ಅಥವಾ ಮರದ ಬಣ್ಣವನ್ನು ಬಳಿದ ಕಲಾತ್ಮಕ ಕೆತ್ತನೆಗಳಿದ್ದುವು. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಮುಖ್ಯದ್ವಾರದ ಬಾಗಿಲಿನಲ್ಲಿ ಏನಾದರೂ ಸರಳವಾದ ವಿನ್ಯಾಸ ಅಥವಾ ಕೆಲವು ಮನೆಗಳ ಬಾಗಿಲಿನಲ್ಲಿ ದೇವರುಗಳ ವಿನ್ಯಾಸವಿರುತ್ತದೆ. ಆದರೆ, ಪರ್ವತಗಳ ಮಧ್ಯೆ ಇರುವ ಹೊಟೇಲ್‌ನ ಮುಖ್ಯಬಾಗಿಲಿನಲ್ಲಿಯೂ 'ಹಿಮಾಲಯದ' ಪರ್ವತಗಳ ಕೆತ್ತನೆ ಸೊಗಸಾಗಿ ಮೂಡಿ ಬಂದಿತ್ತು.
ಇದನ್ನೂ ಓದಿ: ಕಾವೇರಿ ಉಗಮ ಸ್ಥಾನ
ಬಣ್ಣ ಸಂಯೋಜನೆಯ ಹಿಂದಿನ ಕಾರಣವೇನು?
ಸ್ಪಿಟಿ ಕಣಿವೆಯಲ್ಲಿ ನಾವು ತಂಗಿದ್ದ ಬಹುತೇಕ ಹೊಟೇಲ್‌ಗಳು ಹಾಗೂ ಸುತ್ತುಮುತ್ತಲಿನ ಪರಿಸರದಲ್ಲಿ ಕಾಣಿಸುತ್ತಿದ್ದ ಮನೆಗಳು, ಭೇಟಿ ಕೊಟ್ಟ ಮೊನಾಸ್ಟ್ರಿಗಳು ಹೆಚ್ಚಾಗಿ ಬಣ್ಣ ಬಿಳಿ, ಹಳದಿ, ಮರದ ಬಣ್ಣ ಅಥವಾ ಕೆಂಪು ಬಣ್ಣದ ಸಂಯೋಜನೆಯಲ್ಲಿದ್ದವು. ಅಲ್ಲಿ ಬೆಳಗ್ಗೆ ವಾಯುವಿಹಾರ ಮಾಡುತ್ತಿದ್ದಾಗ, ಸಿಮೆಂಟ್‌ನಲ್ಲಿ ಕಲಾತ್ಮಕವಾಗಿ ನಿರ್ಮಿಸಿದ್ದ ಕಿಟಿಕಿಯ ಲೆಂಟಿಲ್ ಭಾಗಕ್ಕೆ ಮರದ ಬಣ್ಣ ಲೇಪಿಸುವುದನ್ನು ನೋಡಿದೆವು. ಹಿಮಾಲಯದ ಎತ್ತರ ಭಾಗದಲ್ಲಿರುವ ಜನರು ಬಿಳಿ, ಹಳದಿ, ಕಂದು, ಕೆಂಪು ಬಣ್ಣಗಳನ್ನೇ ಹೆಚ್ಚಾಗಿ ಬಳಸುವುದಕ್ಕೆ ಏನಾದರೂ ಕಾರಣವಿದೆಯೇ ಎಂದು ಹುಡುಕಿದಾಗ ಸಿಕ್ಕ ಮಾಹಿತಿ ಬಹಳ ಕುತೂಹಲಕಾರಿಯಾಗಿದೆ.

ಬಣ್ಣಗಳ ಹಿಂದಿರುವ ಮಣ್ಣಿನ ಕಥೆ
ಸ್ಪಿಟಿ ಕಣಿವೆಯು ದುರ್ಗಮ ಪರ್ವತ ಪ್ರದೇಶದಲ್ಲಿರುವ ಕಾರಣ ನಗರ ಪ್ರದೇಶಗಳಲ್ಲಿ ಲಭ್ಯವಿರುವ ವಿವಿಧ ಬಣ್ಣಗಳನ್ನು ತರಿಸಿಕೊಳ್ಳಲು ಕಷ್ಟವಾಗುತ್ತದೆ. ಇಲ್ಲಿ ಲಭಿಸುವ ಮಣ್ಣಿನಲ್ಲಿ ಕಬ್ಬಿಣದ ಆಕ್ಸೈಡ್ ಮತ್ತು ಕೆಲವು ವಿಶಿಷ್ಟ ಖನಿಜಾಂಶಗಳಿರುತ್ತವೆ. ಹಾಗಾಗಿ, ಸ್ಥಳೀಯರು ಅಲ್ಲಿ ಸಿಗುವ ನದೀತೀರದ ಜೇಡಿಮಣ್ಣನ್ನು ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಸಂಸ್ಕರಿಸಿ ನೈಸರ್ಗಿಕ ಬಣ್ಣಗಳನ್ನು ಪಡೆದು, ಈ ಬಣ್ಣಗಳನ್ನು ಕಟ್ಟಡಗಳಿಗೆ ಬಳಿಯುತ್ತಾರೆ.
ಚಳಿಗೆ ಮರವೇ ಆಸರೆ
ಮರಕ್ಕೆ ಉಷ್ಣನಿರೋಧ ಗುಣವಿರುವುದರಿಂದ ಹಾಗೂ ಇಲ್ಲಿ ಚಳಿಗಾಲದಲ್ಲಿ- 20 ಡಿಗ್ರಿ ಸೇಂಟಿಗ್ರೇಡ್ ವರೆಗೂ ತಾಪಮಾನ ಇರುವುದರಿಂದ ಚಳಿಯನ್ನು ತಡೆಯಲು ಮರದ ರಚನೆಗಳು ಸೂಕ್ತವಾಗಿರುತ್ತದೆ. ಹೀಗೆ ಸಾಧ್ಯವಿರುವ ಎಲ್ಲಾ ಕಡೆಗಳಲ್ಲಿ ಮರದ ನೆಲ, ಮಾಡು, ಕಿಟಿಕಿ, ಬಾಗಿಲುಗಳನ್ನು ಬಳಸುತ್ತಾರೆ.

ಧಾರ್ಮಿಕ ಬಣ್ಣಗಳ ಸಂಕೇತ
ಸ್ಪಿಟಿ ಕಣಿವೆಯ ಸಂಸ್ಕೃತಿಯ ಟಿಬೆಟಿಯನ್ ಬೌದ್ಧ ಧರ್ಮದ ಪ್ರಭಾವ ಬಹಳಷ್ಟಿದೆ. ಟಿಬೆಟಿಯನ್ ಸಂಸ್ಕೃತಿ ಪ್ರಕಾರ ಕೆಂಪು ಬಣ್ಣವು ಪಾವಿತ್ರ್ಯ ಮತ್ತು ಶಕ್ತಿಯ ಸಂಕೇತವಾಗಿದ್ದು, ದುಷ್ಟಶಕ್ತಿಗಳನ್ನು ನಾಶಮಾಡುತ್ತದೆಯೆಂಬ ನಂಬಿಕೆಯಿಂದ ಮೊನಾಸ್ಟಿಗಳ ಗೋಡೆಯ ಅಂಚಿಗೆ ಕೆಂಪು ಬಣ್ಣವನ್ನು ಬಳಿಯುತ್ತಾರೆ. ಇನ್ನು ಸ್ಪಿಟಿ ಕಣಿವೆಯಲ್ಲಿ ಹಳದಿ ಟೋಪಿ ಧರಿಸುವ 'ಗೆಲುಗ್ಪಾ' ಪಂಥದ ಬೌದ್ಧ ಧರ್ಮದವರು, ಹಳದಿ ಬಣ್ಣವನ್ನು ವಿನಮ್ರತೆಯ ಸಂಕೇತ ಎಂದು ಗುರುತಿಸುತ್ತಾರೆ. ಮನೆ, ಮಂದಿರಗಳ ಗೋಡೇಗಳಿಗೆ ಸುಣ್ಣ ಬಳಿಯುವುದು ಬಿಳಿ ಬಣ್ಣದ ಶುದ್ಧತೆಯ ಸಂಕೇತ. ಒಟ್ಟಿನಲ್ಲಿ, ಪ್ರತಿ ಪ್ರದೇಶದಲ್ಲಿ ಆಚರಣೆಯಲ್ಲಿರುವ ಪದ್ಧತಿಗಳ ಹಿಂದೆ ಆಯಾ ಸ್ಥಳದ ಭೌಗೋಳಿಕ ಮತ್ತು ಧಾರ್ಮಿಕ ಕಾರಣಗಳಿರುತ್ತವೆ.
--
ಸ್ಪಿಟಿ ಕಣಿವೆ ಹಿಮಾಲಯದ ಮಡಿಲಲ್ಲಿರುವ ಶೀತ ಮರುಭೂಮಿ. ಸಮುದ್ರಮಟ್ಟದಿಂದ ಸುಮಾರು 3,800 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ವಿರಳ ಜನವಸತಿ, ಬೌದ್ಧ ಮಠಗಳು, ಹಿಮಾಚ್ಛಾದಿತ ಪರ್ವತಗಳು ಮತ್ತು ನದಿಗಳಿಂದ ವಿಶಿಷ್ಟವಾಗಿದೆ. ಇಲ್ಲಿನ ಚಂದ್ರತಾಲ್ ಸರೋವರ, ಕೀ ಮೊನಾಸ್ಟ್ರಿ ಮತ್ತು ಕುಂಜುಮ್ ಪಾಸ್ ಪ್ರಮುಖ ಆಕರ್ಷಣೆಗಳು. ‘ಸ್ಪಿಟಿ’ ಎಂದರೆ ಮಧ್ಯದ ಭೂಮಿ ಎಂಬ ಅರ್ಥವಿದೆ.