ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಯಲ್ಲಿ ಐತಿಹಾಸಿಕ ಧ್ವಜಾರೋಹಣ ಸಮಾರಂಭ ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿ, ನಿರ್ಮಾಣ ಕಾರ್ಯದ ಪೂರ್ಣತೆಯನ್ನು ಅಧಿಕೃತವಾಗಿ ಘೋಷಿಸಿದರು.

ರಾಮ-ಸೀತಾ ವಿವಾಹ ಪಂಚಮಿಯ ದಿನ ನಡೆದ ಈ ಧಾರ್ಮಿಕ ಸಮಾರಂಭಕ್ಕೆ ಪ್ರಧಾನಿ ಮೋದಿ ಜತೆಗೆ ಆರ್‌.ಎಸ್.ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಹಲವು ಗಣ್ಯರು ಹಾಜರಿದ್ದರು. ಸುಮಾರು 10 ಅಡಿ ಎತ್ತರ ಮತ್ತು 20 ಅಡಿ ಅಗಲದ ಧ್ವಜದಲ್ಲಿ ‘ಓಂ’, ಸೂರ್ಯನ ಸಂಕೇತ ಮತ್ತು ಕೊವಿದಾರ ವೃಕ್ಷದ ಚಿಹ್ನೆಗಳು ಅಲಂಕರಿಸಲ್ಪಟ್ಟಿವೆ.

Ram mandir inauguration


ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯಾ ನಗರವನ್ನು ಹೈ-ಸೆಕ್ಯುರಿಟಿ ವಲಯವಾಗಿ ಪರಿವರ್ತಿಸಲಾಗಿದ್ದು, ಮಂದಿರ ವಲಯ, ರಸ್ತೆ ಮತ್ತು ಘಾಟ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಲಕ್ಷಾಂತರ ಭಕ್ತರು ಸಮಾರಂಭವನ್ನು ನೇರವಾಗಿ ಮತ್ತು ಮಾಧ್ಯಮಗಳ ಮೂಲಕ ವೀಕ್ಷಿಸಿದರು.

ಇಂದು ನಡೆದ ಧ್ವಜಾರೋಹಣದೊಂದಿಗೆ ಅಯೋಧ್ಯಾ ನಗರವು, ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ಮತ್ತೊಂದು ಮಹತ್ತರ ಅಧ್ಯಾಯವನ್ನು ಆರಂಭಿಸಿದೆ. ಈಗಾಗಲೇ ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿರುವ ಈ ಮಂದಿರಕ್ಕೆ ಇಂದಿನಿಂದ ಪ್ರವಾಸಿಗರ ಭೇಟಿಯ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು.