ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡುತ್ತಿದ್ದ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್‌ ಚಾರಿಯಟ್‌ ದಶಕಗಳ ಹಿಂದೆ ಐತಿಹಾಸಿಕ ಸ್ಥಳಗಳನ್ನು ಸುತ್ತಿಸಿ ಪ್ರವಾಸಿ ತನು-ಮನ ತಣಿಸಿತ್ತು. ಈ ಹಿರಿತನಕ್ಕೆ ಈಗ ರಾಜ್ಯ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಗಳು ಹೊಸ ಉತ್ತೇಜನ ನೀಡುವ ನಿಟ್ಟಿನಲ್ಲಿ ನವೀನ ಸುಧಾರಣೆಗಳೊಂದಿಗೆ ರೈಲು ಓಡಾಟವನ್ನು ಮತ್ತೆ ಶುರುಮಾಡಿವೆ. ಇದನ್ನು ಪ್ರವಾಸಿ ಮತ್ತು ಪಾಲುದಾರರ ಗಮನಕ್ಕೆ ತರಲು ಗೋಲ್ಡನ್ ಚಾರಿಯಟ್‌ (ನೂತನ ಐಷಾರಾಮಿ ಪ್ರಾವಾಸಿ ರೈಲು) ಪ್ರದರ್ಶನ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ಅ.24ರಂದು ನಡೆಯಿತು. ಈ ಸಮಯದಲ್ಲಿ ಗೋಲ್ಡನ್‌ ಚಾರಿಯಟ್‌ ರೈಲು ಪ್ರವಾಸಿಗರಿಗೆ, ಇಲ್ಲಿರುವ ಐಷಾರಾಮಿ ವ್ಯವಸ್ಥೆ, ಅವಕಾಶಗಳು, ಆತಿಥ್ಯದ ಕುರಿತು ಅನುಭವ ಮತ್ತು ಪರಿಚಯ ನೀಡಿದರು.

GOLDEN CCHARIOT

ಬೆಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಪ್ಲಾಟ್‌ಫಾರಂ ಸಂಖ್ಯೆ ಮೂರರಲ್ಲಿ ನಿಂತಿದ್ದ, ಗೋಲ್ಡನ್‌ ಚಾರಿಯಟ್‌ ರೈಲು ವೀಕ್ಷಿಸಲು ನಾಲ್ಕು ವಿಭಾಗಗಳಲ್ಲಿ ಆಸಕ್ತ ಪ್ರವಾಸಿಗರು ಮತ್ತು ಪಾಲುದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಐಷಾರಾಮಿ ಪ್ರವಾಸಿ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಎಲ್ಲವೂ ಅದ್ಭುತವಾಗಿವೆ, ಪ್ರವಾಸಿಗರು ಉಳಿಯುವ ಪ್ರತಿಯೊಂದು ಬೋಗಿಗೂ ಕರ್ನಾಟಕದ ರಾಜವಂಶಗಳ ಹೆಸರುಗಳನ್ನು ಇಡಲಾಗಿದೆ.

GOLDEN CHARIOT 1
ಗೋಲ್ಡನ್‌ ಚಾರಿಯಟ್‌ನಲ್ಲಿ ಪ್ರವಾಸ ಮತ್ತೆ ಶುರುವಾಗಿದೆ. ಅಕ್ಟೋಬರ್‌ 11ಕ್ಕೆ ಮೊದಲ ಪ್ರವಾಸ ಶುರುವಾಗಿತ್ತು ಮುಂದಿನ ಪ್ರವಾಸ ಕನ್ನಡ ರಾಜ್ಯೋತ್ಸವ ದಿನದಂದು ಆಗಲಿದೆ. KSTDC ಮತ್ತು IRCTC ಸಹಯೋಗದಲ್ಲಿ ಇದರ ಕಾರ್ಯ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ 1.20 ಕೋಟಿ ರುಪಾಯಿ ಅನುದಾನ ದೊರೆತಿದ್ದು, ರಾಜ್ಯದ ಜತೆಗೆ ಅಂತಾರಾಷ್ಟ್ರೀಯ ಸಾರಿಗೆ ಏಜೆನ್ಸಿಗಳ ಸಲಹೆಗಳನ್ನೂ ಪಡೆದು ವ್ಯವಸ್ಥೆಯಲ್ಲಿ ಆಂತರಿಕ ಬದಲಾವಣೆಗಳನ್ನು ಮಾಡಲಾಗಿದೆ. ಸ್ವೀಟ್‌ ರೂಮ್‌ ಮಾಡಲು ಯೋಜಿಸಲಾಗಿದೆ.
ಪ್ರಶಾಂತ್‌ ಕೃಷ್ಣ. ವ್ಯವಸ್ಥಾಪಕ ನಿರ್ದೇಶಕರು, KSTDC