ಸೌದಿ ಅರೇಬಿಯಾ ಈ ವರ್ಷ ನವೆಂಬರ್ 7 ರಿಂದ 11ರ ವರೆಗೆ ರಿಯಾದ್‌ನಲ್ಲಿ ನಡೆಯಲಿರುವ 26ನೇ ಯುಎನ್ ಪ್ರವಾಸೋದ್ಯಮ ಮಹಾಸಭೆ(UN Tourism General Assembly)ಯ ಆತಿಥ್ಯವನ್ನು ವಹಿಸಲಿದೆ.

‘AI-Powered Tourism: Redefining the Future’ ಎಂಬ ಥೀಮ್‌ನಡಿ ನಡೆಯುತ್ತಿರುವ ಈ ಸಭೆ ಜಾಗತಿಕ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಈ ಸಭೆಯಲ್ಲಿ 160ಕ್ಕೂ ಹೆಚ್ಚು ರಾಷ್ಟ್ರಗಳು ಹಾಗೂ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದ ನಾಯಕರು ಭಾಗವಹಿಸಿ, ಪ್ರಸ್ತುತ ತಂತ್ರಜ್ಞಾನ ಆಧಾರಿತ ಪ್ರವಾಸೋದ್ಯಮದ ರೂಪುರೇಷೆಯನ್ನು ಚರ್ಚಿಸಲಿದ್ದಾರೆ.

Riyadh

ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಈ ಮಹಾಸಭೆಯ ಆತಿಥ್ಯ ವಹಿಸುತ್ತಿರುವ ಸೌದಿ ಅರೇಬಿಯಾ, ಜಾಗತಿಕ ಪ್ರವಾಸೋದ್ಯಮ ರಾಜತಾಂತ್ರಿಕತೆಯಲ್ಲಿ, ನವೀನತೆಯಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ತನ್ನ ನಾಯಕತ್ವವನ್ನು ಮತ್ತೊಮ್ಮೆ ಧೃಢಪಡಿಸಲಿದೆ.

ಈ ಮಹಾಸಭೆಯಲ್ಲಿ ಪ್ರವಾಸೋದ್ಯಮ ಆಧಾರಿತ ಪ್ರಮುಖ ಚರ್ಚೆಗಳು, ಕೃತಕ ಬುದ್ಧಿಮತ್ತೆ ಆಧಾರಿತ ಥೀಮ್ಯಾಟಿಕ್ ಸಂವಾದಗಳು, ವಿಭಿನ್ನ ಸಮಿತಿ ಸಭೆಗಳು, ಹಾಗೂ ಹೊಸ ಪ್ರಧಾನ ಕಾರ್ಯದರ್ಶಿಯ ಆಯ್ಕೆ ಸೇರಿದಂತೆ ಹಲವು ಪ್ರಮುಖ ಅಧಿವೇಶನಗಳು ನಡೆಯಲಿವೆ. ಅದರ ಜತೆಗೆ TOURISE Summit ನ ಉದ್ಘಾಟನೆಯೂ ಇದೇ ಸಮಯದಲ್ಲಿ ನಡೆಯಲಿದ್ದು, ಇದು ಪ್ರವಾಸೋದ್ಯಮದಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆ ಮತ್ತು ಹೂಡಿಕೆಯನ್ನು ಆಕರ್ಷಿಸಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡಲಿದೆ.

ಈ ನವೆಂಬರ್‌ನಲ್ಲಿ ನಡೆಯಲಿರುವ ಈ ಮಹಾಸಭೆ ಮುಂದಿನ ಐವತ್ತು ವರ್ಷಗಳ ಜಾಗತಿಕ ಪ್ರವಾಸೋದ್ಯಮದ ದಿಕ್ಕನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಲಿದೆ.