ರಾಜಸ್ಥಾನದ ಪ್ರವಾಸಿ ತಾಣಗಳನ್ನು ನೋಡಬೇಕು, ಅದರಲ್ಲೂ 'ಡೆಸ್ಟಿನೇಶನ್ ವೆಡ್ಡಿಂಗ್'ಗೆ ಫೇಮಸ್ ಆಗಿರುವ ಐತಿಹಾಸಿಕ ನಗರ ಉದಯಪುರಕ್ಕೆ ಭೇಟಿ ನೀಡಬೇಕು ಅಂದುಕೊಂಡವರಿಗೆ 'ಅಕಾಸಾ ಏರ್' ಸಿಹಿ ಸುದ್ದಿ ನೀಡಿದೆ. ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 'ಅಕಾಸಾ ಏರ್' ವಿಮಾನಯಾನ ಸಂಸ್ಥೆ ಇದೇ ಮೊದಲ ಬಾರಿಗೆ ರಾಜಸ್ಥಾನಕ್ಕೆ ಕಾಲಿಟ್ಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುಂಬೈನಿಂದ ಉದಯಪುರಕ್ಕೆ ದೈನಂದಿನ ನೇರ ವಿಮಾನ ಸೇವೆಯನ್ನು ಘೋಷಿಸಿದೆ. ಬರುವ ಅಕ್ಟೋಬರ್ 15, 2026 ರಿಂದ ಈ ಹೊಸ ಮಾರ್ಗದಲ್ಲಿ ವಿಮಾನಗಳ ಹಾರಾಟ ಶುರುವಾಗಲಿದೆ. ಈ ವಿಮಾನಗಳ ಟಿಕೆಟ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು, ಆಸಕ್ತರು ಅಕಾಸಾ ಏರ್‌ನ ಅಧಿಕೃತ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಥವಾ ಪ್ರಮುಖ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು.

ಇದನ್ನೂ ಓದಿ: ರೈಲಿನ ಫಸ್ಟ್ ಎಸಿ ಕೂಪ್‌ನಲ್ಲಿ 'ಹನಿಮೂನ್' ಸಿದ್ಧತೆ: ಟಿಟಿಇ ಅಮಾನತು

ಬೆಂಗಳೂರು-ಉದಯಪುರ ವಿಮಾನದ ವೇಳಾಪಟ್ಟಿ

ಕನ್ನಡಿಗರ ಪ್ರಯಾಣದ ಅನುಕೂಲಕ್ಕಾಗಿ ಪ್ರತಿದಿನ ಒಂದು ವಿಮಾನ ಕಾರ್ಯನಿರ್ವಹಿಸಲಿದೆ.

* ಬೆಂಗಳೂರಿನಿಂದ ಉದಯಪುರ (QP 1527): ಪ್ರತಿದಿನ ಬೆಳಗ್ಗೆ 8:40ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ, ಬೆಳಗ್ಗೆ 10:55ಕ್ಕೆ ಉದಯಪುರ ತಲುಪಲಿದೆ.

* ಉದಯಪುರಿಂದ ಬೆಂಗಳೂರು (QP 1528): ಬೆಳಗ್ಗೆ 11:35ಕ್ಕೆ ಉದಯಪುರದಿಂದ ಟೇಕ್-ಆಫ್ ಆಗುವ ವಿಮಾನ, ಮಧ್ಯಾಹ್ನ 1:55ಕ್ಕೆ ಮರಳಿ ಬೆಂಗಳೂರು ತಲುಪಲಿದೆ.

ಇದೇ ರೀತಿ ಮುಂಬೈ ಮತ್ತು ಉದಯಪುರ ನಡುವೆಯೂ ಪ್ರತಿದಿನ ಮಧ್ಯಾಹ್ನ ವಿಮಾನ ಸೇವೆ ಲಭ್ಯವಿರಲಿದೆ.

* ಮುಂಬೈನಿಂದ ಉದಯಪುರ (QP 1155): ಪ್ರತಿದಿನ ಬೆಳಗ್ಗೆ 11:25ಕ್ಕೆ ಮುಂಬೈನಿಂದ ಹೊರಡುವ ವಿಮಾನ, ಅಪರಾಹ್ನ 13:00ಕ್ಕೆ ಉದಯಪುರ ತಲುಪಲಿದೆ.

* ಉದಯಪುರದಿಂದ ಬೆಂಗಳೂರು (QP 1156): ಮಧ್ಯಾಹ್ನ13:40ಕ್ಕೆ ಉದಯಪುರದಿಂದ ಟೇಕ್-ಆಫ್ ಆಗುವ ವಿಮಾನ, ಅಪರಾಹ್ನ 15:10ಕೆ ಮರಳಿ ಮುಂಬೈ ತಲುಪಲಿದೆ.

ಉದಯಪುರಕ್ಕೇ ಏಕೆ ಆದ್ಯತೆ?

ಉದಯಪುರವು ಭಾರತದ ಪ್ರೀಮಿಯಂ ಪ್ರವಾಸೋದ್ಯಮ, ಅದ್ದೂರಿ ವಿವಾಹಗಳು ಮತ್ತು ಸಾಂಸ್ಕೃತಿಕ ಪ್ರಯಾಣದ ಪ್ರಮುಖ ಕೇಂದ್ರವಾಗಿದೆ. ಮಹಾನಗರಗಳಿಂದ ಈ ತಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅಕಾಸಾ ಏರ್ ಈ ಹೊಸ ಮಾರ್ಗವನ್ನು ಪರಿಚಯಿಸಿದೆ.

ಈ ಬಗ್ಗೆ ಮಾತನಾಡಿದ ಅಕಾಸಾ ಏರ್‌ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, "ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಉದಯಪುರಕ್ಕೆ ನಮ್ಮ ವಿಮಾನ ಸೇವೆ ಆರಂಭಿಸಲು ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ಮತ್ತು ಮುಂಬೈನ ಗ್ರಾಹಕರು ಈಗ ದೇಶದ ಅತ್ಯಂತ ಸುಂದರ ತಾಣವೊಂದಕ್ಕೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ಪ್ರಯಾಣಿಸಬಹುದು. ಗ್ರಾಹಕ-ಸ್ನೇಹಿ ಜಾಲವನ್ನು ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ," ಎಂದು ಸಂತಸ ಹಂಚಿಕೊಂಡಿದ್ದಾರೆ.

ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯ?

ಅಕಾಸಾ ಏರ್ ತನ್ನ ವಿನೂತನ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳಿಗೆ ಹೆಸರುವಾಸಿಯಾಗಿದೆ. ಈ ವಿಮಾನಗಳಲ್ಲಿ ವಿಶಾಲವಾದ ಲೆಗ್‌ರೂಮ್ (ಕಾಲು ಚಾಚಲು ಜಾಗ) ಇದ್ದು, ಪ್ರಯಾಣದ ವೇಳೆ ಮೊಬೈಲ್/ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಹೆಚ್ಚಿನ ಸೀಟ್‌ಗಳಲ್ಲಿ ಯುಎಸ್‌ಬಿ ಪೋರ್ಟ್‌ಗಳನ್ನು ಅಳವಡಿಸಲಾಗಿದೆ.

'ಕೆಫೆ ಅಕಾಸಾ' ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಊಟ, ಹಬ್ಬದ ವಿಶೇಷ ಮೆನುಗಳು ಮತ್ತು 'ಕೊಂಬುಚಾ'ದಂತಹ ವಿಶೇಷ ಪಾನೀಯಗಳನ್ನು ಆಕಾಶದಲ್ಲೇ ಸವಿಯುವ ಅವಕಾಶವಿದೆ. ಜೊತೆಗೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಸಹ ಪ್ರಯಾಣಿಕರು ಪಡೆಯಬಹುದು.

ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ನಗರಗಳು ಹಾಗೂ ದೋಹಾ, ಅಬುಧಾಬಿ ಮುಂತಾದ 7 ಅಂತಾರಾಷ್ಟ್ರೀಯ ತಾಣಗಳಿಗೆ ಸಂಸ್ಥೆಯು ವಿಮಾನ ಕಾರ್ಯಾಚರಣೆಯನ್ನು ನಡೆಸುತ್ತಿದೆ.