ಭಾರತದ ಹೆಮ್ಮೆಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಜಾಗತಿಕ ಮಟ್ಟದಲ್ಲಿ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದೆ. ಸೋಮವಾರದಿಂದ (8 ಜೂನ್ 2026) ಜಾರಿಗೆ ಬರುವಂತೆ, ಆಗ್ನೇಯ ಏಷ್ಯಾದ ಸುಂದರ ಪ್ರವಾಸಿ ರಾಷ್ಟ್ರವಾದ ಕಾಂಬೋಡಿಯಾ ಅಧಿಕೃತವಾಗಿ ಭಾರತದ ಯುಪಿಐ ಪಾವತಿಗಳನ್ನು ಸ್ವೀಕರಿಸುವ ವಿಶ್ವದ ಒಂಬತ್ತನೆಯ ದೇಶವಾಗಿ ಹೊರಹೊಮ್ಮಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂತಾರಾಷ್ಟ್ರೀಯ ವಿಭಾಗವಾದ ಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮತ್ತು ಕಾಂಬೋಡಿಯಾದ ಇಂಟರ್ನ್ಯಾಷನಲ್ ಸೆಂಟ್ರಲ್ ಬ್ಯಾಂಕ್ ಜಂಟಿಯಾಗಿ ಈ ಐತಿಹಾಸಿಕ ಡಿಜಿಟಲ್ ಲಿಂಕ್ ಅನ್ನು ಅಧಿಕೃತವಾಗಿ ಉದ್ಘಾಟಿಸಿವೆ.

ಇದನ್ನೂ ಓದಿ: ಯುಪಿಐ ಕ್ರಾಂತಿಯ ದೇಶದಲ್ಲಿ 'ಡಿಜಿಟಲ್ ದೇವೋ ಭವ' ಎಂದು ಹೇಳೋದು ಯಾವಾಗ?

ಈ ಹೊಸ ತಾಂತ್ರಿಕ ಸಹಭಾಗಿತ್ವದ ಅಡಿಯಲ್ಲಿ, ಕಾಂಬೋಡಿಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಇನ್ನು ಮುಂದೆ ತಮ್ಮ ಮೊಬೈಲ್‌ನಲ್ಲಿರುವ ಭೀಮ್, ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂನಂಥ ಯುಪಿಐ ಆಪ್‌ಗಳನ್ನು ಬಳಸಿ ಅಲ್ಲಿನ ಸ್ಥಳೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಸುಲಭವಾಗಿ ಹಣ ಪಾವತಿಸಬಹುದಾಗಿದೆ. ಈ ವ್ಯವಸ್ಥೆಯು ಅಂತಾರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ ಕರೆನ್ಸಿ ವಿನಿಮಯ ಮಾಡಿಕೊಳ್ಳುವ ಜಂಜಾಟವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲಿದೆ.

ವಿಶ್ವದ ಅತ್ಯಂತ ದೊಡ್ಡ ಮತ್ತು ಪ್ರಸಿದ್ಧ ಹಿಂದೂ ದೇವಸ್ಥಾನಗಳ ಸಂಕೀರ್ಣವಾದ ಅಂಗ್ಕೋರ್ ವಾಟ್ ವೀಕ್ಷಿಸಲು ಪ್ರತಿ ವರ್ಷ ಭಾರತದಿಂದ ಲಕ್ಷಾಂತರ ಪ್ರವಾಸಿಗರು ಕಾಂಬೋಡಿಯಾಕ್ಕೆ ಪ್ರಯಾಣಿಸುತ್ತಾರೆ. ಕಾಂಬೋಡಿಯಾ ಸರಕಾರವು ಈಗಾಗಲೇ ಭಾರತೀಯರಿಗೆ 'ವೀಸಾ ಆನ್ ಅರೈವಲ್' (Visa on Arrival) ಮತ್ತು ಇ-ವೀಸಾ ಸೌಲಭ್ಯವನ್ನು ನೀಡಿದೆ. ಈಗ ಅದರ ಜೊತೆಗೆ ಉಚಿತ ಮತ್ತು ಸುಲಭ ಡಿಜಿಟಲ್ ಪಾವತಿಯೂ ಲಭ್ಯವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಭಾರತೀಯ ಪ್ರವಾಸಿಗರ ಒಳಹರಿವು 30% ಕ್ಕಿಂತಲೂ ಹೆಚ್ಚು ಹೆಚ್ಚಾಗಲಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಸಚಿವಾಲಯ ಅಂದಾಜಿಸಿದೆ.

ಈಗಾಗಲೇ, ಭೂತಾನ್‌, ನೇಪಾಳ, ಯುಎಇ, ಸಿಂಗಾಪುರ, ಮೊರೀಷಸ್‌, ಶ್ರೀಲಂಕಾ, ಫ್ರಾನ್ಸ್‌, ಮಾಲ್ಡೀವ್ಸ್‌ ದೇಶಗಳಲ್ಲಿ ಯುಪಿಐ ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ವಿಯೆಟ್ನಾಂ, ಜಪಾನ್ ಮತ್ತು ಕೆಲವು ಆಫ್ರಿಕನ್ ದೇಶಗಳೂ ಸಹ ಭಾರತದ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಾತುಕತೆ ನಡೆಸುತ್ತಿವೆ.