ಬೆಂಗಳೂರು ಮತ್ತು ವಿಶಾಖಪಟ್ಟಣಂ ನಡುವಿನ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನು ದಕ್ಷಿಣ ಕರಾವಳಿ ರೈಲ್ವೇ (South Coast Railway) ರೈಲ್ವೇ ಮಂಡಳಿಗೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಅನುಮೋದನೆ ದೊರೆತರೆ, ರಾತ್ರಿ ವೇಳೆಯಲ್ಲಿ ಸಂಚರಿಸುವ ಈ ರೈಲು ಆಧುನಿಕ ಸೌಲಭ್ಯಗಳೊಂದಿಗೆ ಎರಡು ನಗರಗಳ ನಡುವಿನ ದೂರ ಪ್ರಯಾಣವನ್ನು ಇನ್ನಷ್ಟು ವೇಗವಾಗಿ ಹಾಗೂ ಆರಾಮದಾಯಕವಾಗಿ ಮಾಡಲಿದೆ.

ಪ್ರಸ್ತಾವಿತ ರೈಲು ವಾರದಲ್ಲಿ ಆರು ದಿನ ಸಂಚರಿಸುವ ಸಾಧ್ಯತೆಯಿದ್ದು, ಸುಮಾರು 20 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣದ ಅವಧಿ 15 ಗಂಟೆಗಳಿಗಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಸೇವೆಯಿಂದ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಬೆಂಗಳೂರು– ವಿಶಾಖಪಟ್ಟಣಂ ಮಾರ್ಗದಲ್ಲಿ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ಸೇವೆ ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಅಂತಿಮ ವೇಳಾಪಟ್ಟಿ, ನಿಲ್ದಾಣಗಳು ಹಾಗೂ ಸೇವೆ ಆರಂಭದ ದಿನಾಂಕವನ್ನು ರೈಲ್ವೇ ಮಂಡಳಿಯ ಅನುಮೋದನೆಯ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು.