ಐತಿಹಾಸಿಕ ಪ್ರವಾಸಿ ತಾಣಗಳ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಬಂಗಾರ ಧಾಮ ಹೊಸ ಸೇರ್ಪಡೆ. ರಾಜ್ಯ ಸರ್ಕಾರ ʻಬಂಗಾರ ಧಾಮʼವನ್ನು ಐತಿಹಾಸಿಕ ಪ್ರವಾಸಿ ತಾಣವಾಗಿ ಗುರುತಿಸಿದೆ. ‘ಬಂಗಾರ ಧಾಮ’ವನ್ನು ಮಧು ಬಂಗಾರಪ್ಪ ಅವರ ನೇತೃತ್ವದ ಎಸ್. ಬಂಗಾರಪ್ಪ ಫೌಂಡೇಶನ್ ನಿರ್ವಹಿಸುತ್ತಿದೆ. ಮಧು ಬಂಗಾರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವುದಲ್ಲದೇ ಬಂಗಾರ ಧಾಮವನ್ನು ಬಂಗಾರಪ್ಪನವರ ಚಿಂತನೆ, ಅಭಿರುಚಿ, ಜನಸಮೂಹದೊಂದಿಗೆ ಅವರಿಗಿದ್ದ ಬಾಂಧವ್ಯಕ್ಕೆ ತಕ್ಕಂತೆ ನಿರ್ಮಾಣವಾಗಿರುವುದು ವಿಶೇಷ.

ಬಂಗಾರ ಧಾಮವು ಕರ್ನಾಟಕದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಮತ್ತು ಶಕುಂತಲಮ್ಮ ಅವರ ಪುಣ್ಯಸ್ಥಳವಾಗಿ ಅಭಿಮಾನಿಗಳ ಮನದಾಳದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸೊರಬದ ಮಧ್ಯಭಾಗದಲ್ಲಿರುವ ಈ ಧಾಮವು ದೇಶದಲ್ಲಿಯೇ ವಿಭಿನ್ನ ಶಕ್ತಿಧಾಮವಾಗಿ ಗುರುತಿಸಿಕೊಂಡಿದೆ.

bangara dhama

ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಧಾಮವು 100×100 ಅಡಿ ವ್ಯಾಪ್ತಿಯ ವಿಶಿಷ್ಟ ವಿನ್ಯಾಸದ ಪುಣ್ಯಸ್ಥಳವಾಗಿದ್ದು, ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ. ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲಿ ಲಭ್ಯ.

ಇದಲ್ಲದೆ, 1,500 ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದ್ದು, ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಹೆಲಿಫ್ಯಾನ್ ಅಳವಡಿಕೆಯೊಂದಿಗೆ ವಾತಾವರಣ ಮತ್ತಷ್ಟು ಸುಂದರಗೊಂಡಿದೆ. 56 ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುತ್ ಅಲಂಕಾರ ಹಾಗೂ ಆಕರ್ಷಕ ಸಂಗೀತ ಬಂಗಾರಧಾಮದ ವೈಶಿಷ್ಟ್ಯಗಳಾಗಿ ಕಂಗೊಳಿಸುತ್ತಿವೆ.