ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಚಾರ ದುಬಾರಿ
ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಆಗಸ್ಟ್ 1ರಿಂದ ಟೋಲ್ ಶುಲ್ಕ ಹೆಚ್ಚಳ ಜಾರಿಯಾಗಿದೆ.
ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಆಗಸ್ಟ್ 1ರಿಂದ ಟೋಲ್ ಶುಲ್ಕ ಹೆಚ್ಚಳ ಜಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ವಿವಿಧ ವಾಹನ ವರ್ಗಗಳಿಗೆ ಹೊಸ ಶುಲ್ಕ ಅನ್ವಯವಾಗಲಿದೆ.
ಪರಿಷ್ಕೃತ ದರದ ಪ್ರಕಾರ, ಕಾರು, ಜೀಪ್ ಮತ್ತು ವ್ಯಾನ್‌ಗಳಿಗೆ ಏಕಮುಖ ಪ್ರಯಾಣದ ಟೋಲ್ ಶುಲ್ಕ 185 ರು.ರಿಂದ 190 ರು. ಕ್ಕೆ ಏರಿಕೆಯಾಗಿದೆ. 24 ಗಂಟೆಗಳೊಳಗೆ ಹಿಂದಿರುಗುವ ವಾಹನಗಳಿಗೆ ರಿಯಾಯಿತಿ ದರವೂ ಪರಿಷ್ಕೃತವಾಗಿದ್ದು, ಮಾಸಿಕ ಪಾಸ್ ದರವೂ ಹೆಚ್ಚಳ ಕಂಡಿದೆ. ದ್ವಿಚಕ್ರ ವಾಹನಗಳಿಗೆ ಅನ್ವಯಿಸುವ ದರದಲ್ಲೂ ಸಣ್ಣ ಪ್ರಮಾಣದ ಬದಲಾವಣೆ ಮಾಡಲಾಗಿದೆ.
ಈ ಎಕ್ಸ್‌ಪ್ರೆಸ್‌ವೇಯ ಕರ್ನಾಟಕದ ಸುಮಾರು 71 ಕಿಮೀ. ಉದ್ದದ ಹಂತ ಈಗಾಗಲೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಬೆಂಗಳೂರಿನಿಂದ ಕೋಲಾರ ಭಾಗದವರೆಗೆ ವೇಗದ ಪ್ರಯಾಣಕ್ಕೆ ನೆರವಾಗುತ್ತಿದೆ. ಸಂಪೂರ್ಣ 262 ಕಿಮೀ. ಉದ್ದದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಆದರೆ, ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನೂ ವಿಳಂಬವಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಕೇಂದ್ರ ಸರಕಾರ ಅಂತಿಮ ಉದ್ಘಾಟನೆಗೆ ಇನ್ನೂ ನಿಖರ ದಿನಾಂಕ ಘೋಷಿಸಿಲ್ಲ.