ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಯೋಜನಾ ವರದಿಗಳಲ್ಲಿ ನಿರೀಕ್ಷಿಸಿದ್ದ ಪ್ರಯಾಣಿಕರ ಸಂಖ್ಯೆಯನ್ನು ಸಾಧಿಸುವಲ್ಲಿ ವಿಫಲವಾಗಿದೆ ಎಂದು ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (CAG) ವರದಿ ತಿಳಿಸಿದೆ. ಸಂಸತ್ತಿನಲ್ಲಿ ಮಂಡಿಸಲಾದ ವರದಿ ಪ್ರಕಾರ, 2023ರ ವೇಳೆಯಲ್ಲಿಯೂ 2007ಕ್ಕೆ ನಿಗದಿಪಡಿಸಿದ್ದ ಪ್ರಯಾಣಿಕರ ಸಂಖ್ಯೆ ಮತ್ತು ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್ (PHPDT) ಗುರಿಯನ್ನು ಮೆಟ್ರೋ ತಲುಪಿರಲಿಲ್ಲ.

ಹಂತ-1ರಲ್ಲಿ 2021ರ PHPDT 6,429ರಿಂದ 8,852 ಪ್ರಯಾಣಿಕರಷ್ಟಿತ್ತು. ಆದರೆ, ಹೆವಿ ಮೆಟ್ರೋ ವ್ಯವಸ್ಥೆಗೆ ನಿಗದಿಪಡಿಸಿದ ಮಾನದಂಡ 15,000 ಪ್ರಯಾಣಿಕರಾಗಿತ್ತು. ಕಡಿಮೆ ಪ್ರಯಾಣಿಕರ ಸಂಖ್ಯೆಯಿಂದ ಆದಾಯದಲ್ಲಿಯೂ ದೊಡ್ಡ ಕೊರತೆ ಉಂಟಾಗಿದೆ. 2016-17ರಿಂದ 2022-23ರ ನಡುವೆ 7,736.70 ಕೋಟಿ ರು. ಫೇರ್‌ಬಾಕ್ಸ್ ಆದಾಯ ನಿರೀಕ್ಷಿಸಲಾಗಿದ್ದರೂ, ವಾಸ್ತವವಾಗಿ 1,758.13 ಕೋಟಿ ರು. ಮಾತ್ರ ಸಂಗ್ರಹವಾಗಿದೆ. ಅಂದರೆ ಗುರಿಯ ಶೇ.22.72ರಷ್ಟೇ ಸಾಧನೆಯಾಗಿದೆ.

ಇದೇ ವೇಳೆ, ಭೂಸ್ವಾಧೀನ ವೆಚ್ಚವು ₹6,603.39 ಕೋಟಿಯಷ್ಟು ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಬಿಎಂಟಿಸಿಯೊಂದಿಗೆ ಸಮರ್ಪಕ ಸಂಪರ್ಕದ ಕೊರತೆ, ಕೊನೆಯ ಮೈಲಿ ಸಂಪರ್ಕದ ಸಮಸ್ಯೆ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕೊರತೆ ಪ್ರಮುಖ ಕಾರಣಗಳೆಂದು ಸಿಎಜಿ ಗುರುತಿಸಿದೆ. ಖಾಸಗಿ ವಾಹನ ಬಳಕೆದಾರರನ್ನು ಸಾರ್ವಜನಿಕ ಸಾರಿಗೆಗೆ ಸೆಳೆಯುವಲ್ಲಿಯೂ ಮೆಟ್ರೋ ನಿರೀಕ್ಷಿತ ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ.