ಕಲಬುರಗಿ ಮೂಲಕ ವಂದೇ ಭಾರತ್ ಸ್ಲೀಪರ್ ಸಂಚಾರ ಸಾಧ್ಯತೆ
ಬೆಂಗಳೂರು–ಮುಂಬಯಿ ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸುವ ಸಾಧ್ಯತೆ. 1,118 ಕಿಮೀ. ದೂರ ಕ್ರಮಿಸಲಿರುವ ರೈಲು ವಾರದಲ್ಲಿ ಆರು ದಿನ ಸಂಚರಿಸುವ ನಿರೀಕ್ಷೆಯಿದ್ದು, ಬೆಂಗಳೂರಿನಿಂದ ರಾತ್ರಿ ಹೊರಟು ಮರುದಿನ ಬೆಳಗ್ಗೆ ಮುಂಬಯಿ ತಲುಪುವಂತೆ ವೇಳಾಪಟ್ಟಿ ರೂಪಿಸುವ ಸಾಧ್ಯತೆಯಿದೆ.
ಬೆಂಗಳೂರು–ಮುಂಬಯಿ ನಡುವೆ ಪ್ರಸ್ತಾವಿತ ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸುವ ಸಾಧ್ಯತೆ ಇದೆ. ರೈಲ್ವೇ ಮಂಡಳಿಯಿಂದ ಇನ್ನೂ ಅಧಿಕೃತ ಅನುಮೋದನೆ ದೊರೆತಿಲ್ಲವಾದರೂ, ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ರೈಲು ವಾರದಲ್ಲಿ ಆರು ದಿನ ಸಂಚರಿಸುವ ನಿರೀಕ್ಷೆಯಿದೆ.
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ವರೆಗೆ ಸುಮಾರು 1,118 ಕಿಮೀ. ದೂರವನ್ನು ರೈಲು ಕ್ರಮಿಸಲಿದೆ. ಬೆಂಗಳೂರಿನಿಂದ ರಾತ್ರಿ 7.50ಕ್ಕೆ ಹೊರಟು ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈ ತಲುಪುವ ಸಾಧ್ಯತೆ ಇದ್ದು, ಪ್ರಯಾಣಕ್ಕೆ ಸುಮಾರು 16 ಗಂಟೆ 5 ನಿಮಿಷ ಬೇಕಾಗಬಹುದು. ಮುಂಬೈನಿಂದ ರಾತ್ರಿ 8.10ಕ್ಕೆ ಹೊರಟು ಮರುದಿನ ಬೆಳಗ್ಗೆ 11.55ಕ್ಕೆ ಬೆಂಗಳೂರು ತಲುಪುವ ಪ್ರಸ್ತಾವಿತ ವೇಳಾಪಟ್ಟಿಯೂ ಇದೆ.
ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ವಾಡಿ, ಕಲಬುರಗಿ, ಸೊಲ್ಲಾಪುರ, ಪುಣೆ ಹಾಗೂ ಕಲ್ಯಾಣ ಮಾರ್ಗವಾಗಿ ರೈಲು ಸಂಚರಿಸುವ ಸಾಧ್ಯತೆ ಇದೆ. ಕಲಬುರಗಿ ಮಾರ್ಗದಲ್ಲಿ ತಿರುವುಗಳು ಕಡಿಮೆ ಇರುವುದರಿಂದ ಗಂಟೆಗೆ 130 ಕಿಮೀ. ವೇಗದ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ. ಪರ್ಯಾಯ ಹುಬ್ಬಳ್ಳಿ ಮಾರ್ಗದಲ್ಲಿ ಘಾಟ್ ಹಾಗೂ ಹೆಚ್ಚು ತಿರುವುಗಳಿರುವುದರಿಂದ ಪ್ರಯಾಣ ಸಮಯ ಹೆಚ್ಚಾಗುವ ಸಾಧ್ಯತೆ ಇದೆ.