ಬೆಂಗಳೂರು ಏರ್ಪೋರ್ಟ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಐಎಎಲ್ ಹೊಸ ನಿಯಮವನ್ನು ಜಾರಿಗೆ ತರಲು ಸಿದ್ಧವಾಗಿದೆ. ಈ ನಿಯಮದ ಅನುಸಾರ ಖಾಸಗಿ ವಾಹನಗಳು ಪಿಕಪ್‌ ಮಾಡಲು ಬಂದಾಗ ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಾದರೆ ದಂಡ ವಿಧಿಸಲಾಗುತ್ತದೆ. ಹದಿನೆಂಟು ನಿಮಿಷ ಮೀರಿದರೆ ಗಾಡಿ ಜಪ್ತಿ ಮಾಡಲಾಗುತ್ತದೆ. ಹೊಸ ನಿಯಮವು ಡಿ.8ರಿಂದ ಜಾರಿಯಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 1 ಲಕ್ಷ ವಾಹನಗಳ ಸಂಚಾರವಿರುವ ದೇಶದ ಮೂರನೇ ಅತಿದೊಡ್ಡ ನಿಲ್ದಾಣ. ಈ ರಸ್ತೆಯಲ್ಲಿ ಪ್ರತಿನಿತ್ಯವೂ 1.3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಇಲ್ಲಿ ನಿತ್ಯ ಟ್ರಾಫಿಕ್‌ನ ಸಮಸ್ಯೆ. ಈ ಸಮಸ್ಯೆ ಬಗೆಹರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ವಿಮಾನ ನಿಲ್ದಾಣದ ಟರ್ಮಿನಲ್-1 ಮತ್ತು ಟರ್ಮಿನಲ್-2ರ ಎಂಟ್ರನ್ಸ್‌ ಗೇಟ್‌ಗೆ ಪಿಕಪ್‌ ಗೆ ಬರುವ ಖಾಸಗಿ ವಾಹನಗಳಿಗೆ ಮೊದಲ 8 ನಿಮಿಷಗಳ ಕಾಲ ಉಚಿತ ಪ್ರವೇಶ ಕಲ್ಪಿಸಲಾಗಿದೆ. 8ರಿಂದ 13 ನಿಮಿಷದವರೆಗೆ ವಾಹನವನ್ನು ಅಲ್ಲಿಯೇ ನಿಲ್ಲಿಸಿದ್ದರೆ ರು.150 ಶುಲ್ಕ ವಿಧಿಸಲಾಗುತ್ತದೆ. 13 ರಿಂದ 18 ನಿಮಿಷದವರೆಗೆ ವಾಹನವನ್ನು ನಿಲ್ಲಿಸಿದರೆ ರು.300 ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಕ್ಕೂ ಹೆಚ್ಚು ಕಾಲ ಏರ್ಪೋರ್ಟ್‌ನಲ್ಲೇ ವಾಹನ ನಿಂತಿದ್ದರೆ ಅಂಥ ಗಾಡಿಗಳನ್ನು ಜಪ್ತಿ ಮಾಡಿ, ಪೊಲೀಸ್ ಠಾಣೆಗೆ ರವಾನೆ ಮಾಡಲಾಗುತ್ತದೆ. ಮಾಲೀಕರು ದಂಡದ ಜತೆಗೆ ಟೋಯಿಂಗ್ ಶುಲ್ಕವನ್ನೂ ಕಟ್ಟಬೇಕಾಗುವುದು.

Airport Taxi

ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ಬಿಸಿನೆಸ್‌ ವಾಹನಗಳಿಗೆ ಮೊದಲ 10 ನಿಮಿಷಗಳ ಕಾಲ ಉಚಿತ ಪಾರ್ಕಿಂಗ್ ಅವಕಾಶವಿದೆ. ಆದರೆ, ಈ ವಾಹನಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಕಾಯಬೇಕು ಎಂದು ನಿಯಮ ರೂಪಿಸಲಾಗಿದೆ. ನಿಲ್ದಾಣದ ಟರ್ಮಿನಲ್‌ 1ರಲ್ಲಿ ಈ ವಾಹನಗಳು P4 ಮತ್ತು P3 ಪಾರ್ಕಿಂಗ್ ವಲಯಕ್ಕೆ ಮಾತ್ರ ತೆರಳಬೇಕು. ಟರ್ಮಿನಲ್ 2 ರಲ್ಲಿ P2 ಪಾರ್ಕಿಂಗ್ ವಲಯಕ್ಕೆ ತೆರಳಬೇಕೆಂಬ ನಿಯಮವನ್ನು ರೂಪಿಸಲಾಗಿದೆ.

ಈ ಹೊಸ ನಿಯಮವು ಪ್ರಯಾಣಿಕರನ್ನು ಡ್ರಾಪ್‌ ಮಾಡಲು ನಿರ್ಗಮನ ಗೇಟ್‌ಗೆ ಬರುವ ಖಾಸಗಿ ಮತ್ತು ಬಿಸಿನೆಸ್‌ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಬಿಐಎಎಲ್‌ ಸ್ಪಷ್ಟಪಡಿಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಬಿಐಎಎಲ್ #BeCabWise ಅಭಿಯಾನವನ್ನು ಆರಂಭಿಸಿದೆ. ಪ್ರಯಾಣಿಕರು ಏರ್‌ಪೋರ್ಟ್ ಟ್ಯಾಕ್ಸಿ, ಉಬರ್, ಓಲಾ , ಕ್ವಿಕ್ ರೈಡ್, ಓಮ್ ಎಲೆಕ್ಟ್ರಿಕ್ ಮತ್ತು ಡಬ್ಲ್ಯೂಟಿಐ ನಂತಹ ಅಧಿಕೃತ ಸೇವೆಗಳನ್ನು ಮಾತ್ರ ಬಳಸಲು ಕೋರಲಾಗಿದೆ. ಅನಧಿಕೃತ ಸ್ಥಳಗಳಲ್ಲಿ ನಿಲ್ಲುವ ಅಥವಾ ನಿಯಮವನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲಾಗುವುದೆಂದು ತಿಳಿಸಲಾಗಿದೆ.