ಅಸ್ಸಾಂ ರಾಜ್ಯವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿನೂತನ ಹೆಜ್ಜೆಯನಿರಿಸಿದ್ದು, ಬಹುನಿರೀಕ್ಷಿತ ‘ಗುವಾಹಟಿ ಗೇಟ್‌ವೇ ಟರ್ಮಿನಲ್’ ಯೋಜನೆಯ ಉದ್ಘಾಟನೆಗೆ ಸಿದ್ಧತೆ ನಡೆಸಿದೆ. ಬ್ರಹ್ಮಪುತ್ರಾ ನದಿಯ ತೀರದಲ್ಲಿರುವ ಗುವಾಹಟಿ ನಗರದ ಫ್ಯಾನ್ಸಿ ಬಜಾರ್ ಪ್ರದೇಶದಲ್ಲಿ ಈ ಆಧುನಿಕ ನದಿ ಸಾರಿಗೆ ಟರ್ಮಿನಲ್ ನಿರ್ಮಾಣಗೊಂಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನವೆಂಬರ್ 7, 2025ರಂದು ಈ ಯೋಜನೆ ಉದ್ಘಾಟನೆಯಾಗಲಿದೆ. ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ನಿರ್ಮಿಸಲಾದ ಈ ಟರ್ಮಿನಲ್ ದೇಶದ ಮೊದಲ ಅತ್ಯಾಧುನಿಕ ನದಿ ಸಾರಿಗೆ ಕೇಂದ್ರವಾಗಲಿದ್ದು, ರಾಜ್ಯದ ಸಂಪರ್ಕ ವ್ಯವಸ್ಥೆ ಮತ್ತು ಪ್ರವಾಸೋದ್ಯಮದ ಮೂಲಸೌಕರ್ಯದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ.

Gateway Trminal on Brahmaputra river


ಗುವಾಹಟಿ ಗೇಟ್‌ವೇ ಟರ್ಮಿನಲ್‌ನಲ್ಲಿ ಪ್ರಯಾಣಿಕರ ವಿಶ್ರಾಂತಿ ಲೌಂಜ್‌ಗಳು, ವೀಕ್ಷಣಾ ಮಂಚಗಳು, ಆಧುನಿಕ ಬೋರ್ಡಿಂಗ್ ವಲಯಗಳು ಸೇರಿದಂತೆ ವಿಶ್ವಮಟ್ಟದ ಸೌಕರ್ಯಗಳನ್ನು ಒದಗಿಸಲಾಗಿದ್ದು, ಇವೆಲ್ಲವೂ ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ನೀಡಲಿವೆ. ನದಿ ಮಾರ್ಗದ ಮೂಲಕ ಪ್ರಯಾಣಕ್ಕೆ ಹೊಸ ಆಯಾಮ ನೀಡುವ ಈ ಯೋಜನೆ, ಅಸ್ಸಾಂ ಪ್ರವಾಸೋದ್ಯಮದ ವ್ಯಾಪ್ತಿಯನ್ನು ವಿಸ್ತರಿಸಲು ಸಹಕಾರಿಯಾಗಲಿದೆ.

ಈ ಮಹತ್ವಾಕಾಂಕ್ಷಿ ಯೋಜನೆ ಪರಿಸರ ಸ್ನೇಹಿಯಾಗಿದ್ದು, ಸುಸ್ಥಿರ ಪ್ರವಾಸೋದ್ಯಮದ ಬಗೆಗೆ ರಾಜ್ಯ ಹೊಂದಿರುವ ಬದ್ಧತೆಯನ್ನೂ ಸೂಚಿಸುತ್ತದೆ.