ವೈಭವೋಪೇತ ಕಟಕ್ ಬಾಲಿ ಜಾತ್ರೆ ಆರಂಭಕ್ಕೆ ದಿನಗಣನೆ
ಪ್ರಾಚೀನ ಸಮುದ್ರ ಸಂಸ್ಕೃತಿಯ ನೆನಪುಗಳನ್ನು ಪ್ರತಿಫಲಿಸುವ ಕಟಕ್‌ನ ಬಾಲಿ ಜಾತ್ರೆ ಇದೇ ನವೆಂಬರ್ 5ರಿಂದ ಆರಂಭಗೊಳ್ಳಲಿದೆ. ಈ ಭವ್ಯ ಉತ್ಸವಕ್ಕೆ ಇಂಡೋನೇಷ್ಯಾ ಮೊದಲ ಸಹಭಾಗಿತ್ವ ರಾಷ್ಟ್ರವಾಗಿ ಕೈಜೋಡಿಸಿದೆ.
ಪ್ರಾಚೀನ ಸಮುದ್ರ ಸಂಸ್ಕೃತಿಯ ನೆನಪುಗಳನ್ನು ಪ್ರತಿಫಲಿಸುವ ಕಟಕ್‌ನ ಬಾಲಿ ಜಾತ್ರೆ ಇದೇ ನವೆಂಬರ್ 5ರಿಂದ ಆರಂಭಗೊಳ್ಳಲಿದೆ. ಈ ಭವ್ಯ ಉತ್ಸವಕ್ಕೆ ಇಂಡೋನೇಷ್ಯಾ ಮೊದಲ ಸಹಭಾಗಿತ್ವ ರಾಷ್ಟ್ರವಾಗಿ ಕೈಜೋಡಿಸಿದೆ. ಇದರೊಂದಿಗೆ, ಬಾಲಿ ಜಾತ್ರೆ ಕೇವಲ ಒಡಿಶಾದ ಸಂಸ್ಕೃತಿಯ ಹಬ್ಬವಾಗಿರದೆ, ಅಂತಾರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಯಾಗಿ ಗಮನಸೆಳೆಯಲಿದೆ.
“ಸಾದಭರು” ಎಂದೇ ಖ್ಯಾತರಾಗಿದ್ದ ಆಗಿನ ಕಾಲದ ಕಲಿಂಗದ ಸಮುದ್ರ ವ್ಯಾಪಾರಿಗಳು ಸುಮಾರು 2,500 ವರ್ಷಗಳ ಹಿಂದೆ ಬಾಲಿ, ಜಾವಾ ಮತ್ತು ಸುಮಾತ್ರ ದ್ವೀಪಗಳಿಗೆ ಹಡುಗುಗಳಲ್ಲಿ ಸಾಗಿ ವ್ಯಾಪಾರ ನಡೆಸುತ್ತಿದ್ದರು, ಈ ಕಾರಣದಿಂದ ಎರಡೂ ದೇಶಗಳ ಸಂಸ್ಕೃತಿಯ ಪರಿಚಯ ಒಬ್ಬರಿಗೊಬ್ಬರಿಗಾಯಿತು. ಅವರ ಆ ದೀರ್ಘ ನಂಟಿನ ನೆನಪುಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ಈ ಬಾರಿ ಇಂಡೋನೇಷ್ಯಾ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದೆ.

ಮಹಾನದಿ ನದಿಯ ತೀರದಲ್ಲಿರುವ ಬರಬತಿ ಕೋಟೆ ಸಮೀಪದ 60 ಏಕರೆ ಪ್ರದೇಶದಲ್ಲಿ ಆಯೋಜಿಸಲಾದ ಈ ಉತ್ಸವದಲ್ಲಿ ಇಂಡೋನೇಷ್ಯಾ ಪೆವಿಲಿಯನ್ ಪ್ರಮುಖ ಆಕರ್ಷಣೆ. ಅಲ್ಲಿ ಆ ದೇಶದ ಕಲಾಕೃತಿಗಳು, ಹಸ್ತಕಲಾ ವಸ್ತುಗಳು ಹಾಗೂ ಸಂಸ್ಕೃತಿಯ ವೈವಿಧ್ಯತೆ ಪ್ರದರ್ಶನಗೊಳ್ಳಲಿವೆ. ಇಂಡೋನೇಷ್ಯಾದ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿ ಕೂಡಾ ಈ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಸಾಂಪ್ರದಾಯಿಕ ಆಕರ್ಷಣೆಗಳ ಜತೆಗೆ ಈ ಬಾರಿ ಹೊಸ ವೈಶಿಷ್ಟ್ಯಗಳು ಕೂಡಾ ಹಬ್ಬದ ಕಳೆ ಹೆಚ್ಚಿಸುತ್ತಿವೆ. 3D ಗ್ಯಾಲರಿ, ಅನುಭವ ವಲಯ (Experience Zone), ಪುರಾತನ ಕಾರುಗಳ ಪ್ರದರ್ಶನ ಹಾಗೂ ಖ್ಯಾತ ಗಾಯಕಿಯರಾದ ಶ್ರೇಯಾ ಘೋಷಾಲ್ ಮತ್ತು ಹರ್ಷದೀಪ್ ಕೌರ್ ಅವರ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಲಿವೆ.