ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಯ ವಿಶೇಷ ಜಾಯ್‌ರೈಡ್
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (DHR), ದುರ್ಗಾಪೂಜೆ ಹಬ್ಬದ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 1ರಿಂದ ವಿಶೇಷ ಜಾಯ್‌ರೈಡ್ ಸೇವೆಗಳನ್ನು ಆರಂಭಿಸಲಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (DHR), ದುರ್ಗಾಪೂಜೆ ಹಬ್ಬದ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 1ರಿಂದ ವಿಶೇಷ ಜಾಯ್‌ರೈಡ್ ಸೇವೆಗಳನ್ನು ಆರಂಭಿಸಲಿದೆ. ಐತಿಹಾಸಿಕ ಟಾಯ್ ಟ್ರೈನ್‌ನಲ್ಲಿ ಸಂಚರಿಸುತ್ತಾ ಡಾರ್ಜಿಲಿಂಗ್ ಬೆಟ್ಟಗಳ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಉದ್ದೇಶ.

ಡಾರ್ಜಿಲಿಂಗ್–ಘೂಮ್ ಮಾರ್ಗದಲ್ಲಿ ನಾಲ್ಕು ಏಕಮುಖ ಜಾಯ್‌ರೈಡ್‌ಗಳು ಸಂಚರಿಸಲಿವೆ. ಡೀಸೆಲ್ ಎಂಜಿನ್ ರೈಲುಗಳು ಡಾರ್ಜಿಲಿಂಗ್‌ನಿಂದ ಬೆಳಗ್ಗೆ 9.20 ಮತ್ತು 11.25ಕ್ಕೆ ಹೊರಡಲಿದ್ದು, ಘೂಮ್‌ನಿಂದ ಬೆಳಗ್ಗೆ 10.25 ಮತ್ತು ಮಧ್ಯಾಹ್ನ 12.30ಕ್ಕೆ ಹೊರಡಲಿವೆ. ಏಕಮುಖ ಪ್ರಯಾಣದ ಪ್ರಸ್ತಾವಿತ ದರ 800 ರು.
ಇದರ ಜತೆಗೆ ಕುರಸಿಯಾಂಗ್–ಮಹಾನದಿ ನಡುವೆ ಎರಡು ಸುತ್ತಿನ ವಿಶೇಷ ಜಾಯ್‌ರೈಡ್‌ಗಳು ಇರಲಿವೆ. ‘ರೆಡ್ ಪಾಂಡಾ’ ಹೆಸರಿನ ಸ್ಟೀಮ್ ರೈಲಿನ ದರ ₹1,530. ಇದು ಕುರಸಿಯಾಂಗ್‌ನಿಂದ ಬೆಳಗ್ಗೆ 9ಕ್ಕೆ ಹೊರಟು 10ಕ್ಕೆ ಮಹಾನದಿ ತಲುಪಲಿದೆ. ‘ಮುಕ್ತಧಾರಾ’ ಡೀಸೆಲ್ ರೈಲು ಮಧ್ಯಾಹ್ನ 3.15ಕ್ಕೆ ಹೊರಟು 4ಕ್ಕೆ ಮರಳಲಿದೆ. ಇದರ ದರ 1,030 ರು.
‘ಮುಕ್ತಧಾರಾ’ ಹೆಸರನ್ನು ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವಾರ್ಥವಾಗಿ ಇಡಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಮಹಾನದಿ ರೈಲು ನಿಲ್ದಾಣದಲ್ಲಿ ಇದರ ವಿಶೇಷ ಸಂಚಾರವೂ ನಡೆಯಲಿದೆ.