ಉತ್ತರ ದಿನಾಜ್‌ಪುರಕ್ಕೆ ರೈಲ್ವೇ ಮೂಲಸೌಕರ್ಯಕ್ಕೆ ಒತ್ತು
ಕಲಿಯಗಂಜ್ ಅನ್ನು ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಬುನಿಯಾದ್‌ಪುರದೊಂದಿಗೆ ಸಂಪರ್ಕಿಸುವ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ₹1,147 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಗತ್ಯ ಅನುದಾನವೂ ಮೀಸಲಾಗಿದೆ.
ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲಿ ರೈಲ್ವೇ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವಾಲಯ ಮಹತ್ವದ ಯೋಜನೆಗಳನ್ನು ಕೈಗೊಂಡಿದೆ. ಕಲಿಯಗಂಜ್ ಅನ್ನು ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಬುನಿಯಾದ್‌ಪುರದೊಂದಿಗೆ ಸಂಪರ್ಕಿಸುವ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ 1,147 ಕೋಟಿ ರು. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಗತ್ಯ ಅನುದಾನವೂ ಮೀಸಲಾಗಿದೆ. ಯೋಜನೆಗಾಗಿ 168 ಹೆಕ್ಟೇರ್ ಭೂಮಿ ಅಗತ್ಯವಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಈ ಹೊಸ ಮಾರ್ಗ ಪೂರ್ಣಗೊಂಡರೆ ಉತ್ತರ ದಿನಾಜ್‌ಪುರದ ನಿವಾಸಿಗಳಿಗೆ ಬಾಲುರ್‌ಘಾಟ್ ಸೇರಿದಂತೆ ದಕ್ಷಿಣ ದಿನಾಜ್‌ಪುರದ ವಿವಿಧ ಪ್ರದೇಶಗಳಿಗೆ ನೇರ ರೈಲು ಸಂಪರ್ಕ ದೊರೆಯಲಿದೆ. ಜತೆಗೆ ಡಾಲ್‌ಖೋಲಾ, ದಾಲಿಂಗಾಂವ್, ಕಲಿಯಗಂಜ್ ಮತ್ತು ಅಲುವಾಬಾರಿ ರೋಡ್ ರೈಲು ನಿಲ್ದಾಣಗಳನ್ನು ಆಧುನೀಕರಿಸುವ ಕಾಮಗಾರಿಯೂ ಪ್ರಗತಿಯಲ್ಲಿದೆ.
ವಿಸ್ತರಿತ ಎತ್ತರದ ವೇದಿಕೆಗಳು, ನಿರೀಕ್ಷಣಾ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಪಾದಚಾರಿ ಮೇಲ್ಸೇತುವೆ, ಸುಧಾರಿತ ಪ್ರವೇಶ ರಸ್ತೆ ಹಾಗೂ ಭದ್ರತಾ ಗೋಡೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ನಾಲ್ಕು ನಿಲ್ದಾಣಗಳೂ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ ಹಾಗೂ ಆಧುನಿಕ ರೈಲು ಸೇವೆ ಒದಗಿಸುವ ಗುರಿಯನ್ನು ಹೊಂದಿವೆ