‘ಹೀಲ್ ಇನ್ ರಾಜಸ್ಥಾನ’ ನೀತಿಯಿಂದ ಜಾಗತಿಕ ಗುರಿ
ರಾಜ್ಯ ಸರಕಾರ ಜಾರಿಗೆ ತಂದಿರುವ ‘ಹೀಲ್ ಇನ್ ರಾಜಸ್ಥಾನ (HEAL in Rajasthan) ನೀತಿ–2025’ ಮಹತ್ವಾಕಾಂಕ್ಷೆಯ ಕನಸಿಗೆ ಹೊಸ ದಿಕ್ಕು ನೀಡುತ್ತಿದೆ.
ರಾಜಸ್ಥಾನ ಎಂದಾಕ್ಷಣ ಅರಮನೆಗಳು, ಕೋಟೆಗಳು, ಮರುಭೂಮಿ ಮತ್ತು ರಾಜಮನೆತನದ ಸಂಸ್ಕೃತಿ ನೆನಪಾಗುತ್ತದೆ. ಆದರೆ, ಈಗ ರಾಜ್ಯವು ವೈದ್ಯಕೀಯ ಪ್ರವಾಸೋದ್ಯಮ (Medical Value Travel) ಕ್ಷೇತ್ರದಲ್ಲೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಳ್ಳಲು ಸಜ್ಜಾಗಿದೆ. ರಾಜ್ಯ ಸರಕಾರ ಜಾರಿಗೆ ತಂದಿರುವ ‘ಹೀಲ್ ಇನ್ ರಾಜಸ್ಥಾನ (HEAL in Rajasthan) ನೀತಿ–2025’ ಮಹತ್ವಾಕಾಂಕ್ಷೆಯ ಕನಸಿಗೆ ಹೊಸ ದಿಕ್ಕು ನೀಡುತ್ತಿದೆ.
ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ದೃಷ್ಟಿಯಲ್ಲಿ, ರಾಜ್ಯವು ಕೇವಲ ಪ್ರವಾಸೋದ್ಯಮದಲ್ಲಷ್ಟೇ ಅಲ್ಲದೆ, ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳ ಮೂಲಕವೂ ದೇಶದ ಮುಂಚೂಣಿ ರಾಜ್ಯವಾಗಬೇಕು ಎಂಬ ಗುರಿ ಹೊಂದಿದೆ. ಅದಕ್ಕಾಗಿ ಆರೋಗ್ಯ ಮೂಲಸೌಕರ್ಯ, ಡಿಜಿಟಲ್ ಸೇವೆಗಳು ಹಾಗೂ ಹೂಡಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಪ್ರಸ್ತುತ ರಾಜಸ್ಥಾನದಲ್ಲಿ 8,000ಕ್ಕೂ ಹೆಚ್ಚು ಆಸ್ಪತ್ರೆಗಳು, 46 ವೈದ್ಯಕೀಯ ಕಾಲೇಜುಗಳು ಹಾಗೂ 15 ದಂತ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳ ಜಾಲ ರಾಜ್ಯವನ್ನು ವೈದ್ಯಕೀಯ ಸೇವೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತಿದೆ.
ಈ ನೀತಿಯ ಭಾಗವಾಗಿ ಮೆಡಿಕಲ್ ವ್ಯಾಲ್ಯೂ ಟ್ರಾವೆಲ್ (MVT) ಪೋರ್ಟಲ್ ಹಾಗೂ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಚಿಕಿತ್ಸೆ, ಆಸ್ಪತ್ರೆಗಳು, ವೈದ್ಯರು, ವೆಚ್ಚ ಹಾಗೂ ಇತರೆ ಅಗತ್ಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯುವ ಅವಕಾಶ ರೋಗಿಗಳಿಗೆ ಲಭ್ಯವಾಗಲಿದೆ. ವಿದೇಶಿ ರೋಗಿಗಳಿಗೆ ಭಾಷಾ ತೊಂದರೆ ಉಂಟಾಗದಂತೆ ಬಹುಭಾಷಾ ಸಹಾಯವಾಣಿ ಸೇವೆಯನ್ನೂ ಆರಂಭಿಸಲಾಗುತ್ತಿದೆ.
ಇದನ್ನೂ ಓದಿ: ವೈದ್ಯರೇ ನಿಮ್ಮ ಅತ್ಯುತ್ತಮ ಸಹಪಥಿಕರು
ರಾಜಸ್ಥಾನ ಸರಕಾರ ಹೂಡಿಕೆದಾರರನ್ನು ಆಕರ್ಷಿಸಲು ರಾಜಸ್ಥಾನ ಇನ್ವೆಸ್ಟ್‌ಮೆಂಟ್ ಪ್ರೊಮೋಷನ್ ಸ್ಕೀಮ್, ಕೈಗಾರಿಕಾ ಅಭಿವೃದ್ಧಿ ನೀತಿ ಹಾಗೂ ಪ್ರವಾಸೋದ್ಯಮ ನೀತಿಯಡಿ ಹಲವು ಪ್ರೋತ್ಸಾಹಕ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದ ಹೊಸ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಯಾಗುವುದರ ಜತೆಗೆ ರಾಜ್ಯದ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳೂ ಹೆಚ್ಚಾಗಲಿವೆ.
ರಾಜಸ್ಥಾನ ಸರಕಾರ ಅಂತಾರಾಷ್ಟ್ರೀಯ ಆರೋಗ್ಯ ಸಮ್ಮೇಳನಗಳು ಹಾಗೂ ವೈದ್ಯಕೀಯ ಪ್ರದರ್ಶನಗಳಲ್ಲಿ ಭಾಗವಹಿಸಿ ರಾಜ್ಯವನ್ನು ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ಪರಿಚಯಿಸಲು ಯೋಜಿಸಿದೆ. ಆಸ್ಪತ್ರೆಗಳಿಗೆ NABH ಮತ್ತು JCI ಮಾನ್ಯತೆ ಪಡೆಯಲು ಉತ್ತೇಜನ, ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ, ಆಯುಷ್ ಚಿಕಿತ್ಸೆಗಳ ಸಮನ್ವಯ, ಪಾರದರ್ಶಕ ಚಿಕಿತ್ಸಾ ವೆಚ್ಚ ಹಾಗೂ ವಿಶ್ವಮಟ್ಟದ ವೈದ್ಯಕೀಯ ಕೇಂದ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಸಾಂಸ್ಕೃತಿಕ ಪ್ರವಾಸೋದ್ಯಮದಲ್ಲಿ ಈಗಾಗಲೇ ಜಾಗತಿಕ ಖ್ಯಾತಿ ಪಡೆದಿರುವ ರಾಜಸ್ಥಾನ, ಈಗ ಆರೋಗ್ಯ ಸೇವೆಯನ್ನೂ ತನ್ನ ಮತ್ತೊಂದು ಪ್ರಮುಖ ಶಕ್ತಿಯನ್ನಾಗಿ ರೂಪಿಸಿಕೊಳ್ಳುತ್ತಿದೆ. ಐತಿಹಾಸಿಕ ಪರಂಪರೆ, ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಕೈಗೆಟುಕುವ ವೆಚ್ಚದಲ್ಲಿ ಈ ಮೂರು ಅಂಶಗಳ ಸಮನ್ವಯದಿಂದ ರಾಜ್ಯವು ಮುಂದಿನ ದಿನಗಳಲ್ಲಿ ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ಗಮ್ಯಸ್ಥಾನವಾಗುವ ವಿಶ್ವಾಸ ವ್ಯಕ್ತವಾಗಿದೆ.