ಅರ್‌ಪೋರಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 25 ಮಂದಿ ಮೃತಪಟ್ಟ ಪರಿಣಾಮ, ಗೋವಾ ಸರಕಾರ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಯಾವುದೇ ಹೊಟೇಲ್, ಕ್ಲಬ್, ರೆಸಾರ್ಟ್ ಅಥವಾ ಪ್ರವಾಸೋದ್ಯಮ ಘಟಕಗಳ ಪರವಾನಗಿಯನ್ನು ನೇರವಾಗಿ ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರಕಾರವು ಎಲ್ಲಾ ಪ್ರವಾಸೋದ್ಯಮ ಘಟಕಗಳಲ್ಲಿ ಅಗ್ನಿ–ಸುರಕ್ಷತೆ ಮತ್ತು ಕಟ್ಟಡದ ಭದ್ರತೆ ಸಂಬಂಧಿತ ಸಮಗ್ರ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಅಗ್ನಿ NOC, ಕಟ್ಟಡದ ಸ್ಥಿರತೆ, ಎಲೆಕ್ಟ್ರಿಕಲ್ ವೈಯರಿಂಗ್, ಜನಸಮೂಹ ನಿಯಂತ್ರಣ, ತುರ್ತು ನಿರ್ಗಮನದ್ವಾರಗಳು ಮತ್ತು ಸಂಬಂಧಿತ ಸುರಕ್ಷತಾ ನಿಯಮಗಳ ಪಾಲನೆಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಲಿದೆ.

goa club


ರಾಜ್ಯದ ದುರಂತ ನಿರ್ವಹಣಾ ಪ್ರಾಧಿಕಾರ (SDMA) ಕೂಡ ತುರ್ತು ನಿರ್ದೇಶನ ಹೊರಡಿಸಿದ್ದು, ಎಲ್ಲಾ ನೈಟ್‌ಕ್ಲಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ರೆಸಾರ್ಟ್‌ಗಳು ಏಳು ದಿನಗಳೊಳಗೆ ತಮ್ಮದೇ ಮಟ್ಟದಲ್ಲಿ ಸುರಕ್ಷತಾ ಆಡಿಟ್‌ ನಡೆಸಿ ದಾಖಲೆಗಳನ್ನು ನವೀಕರಿಸಬೇಕಿದೆ. ಫೈರ್‌ ಎಮರ್ಜನ್ಸಿ ಎಕ್ಸಿಟ್‌, ಸ್ಪ್ರಿಂಕ್ಲರ್‌ಗಳು, ಸರಿಯಾದ ವೈಯರಿಂಗ್ ವ್ಯವಸ್ಥೆ, ತುರ್ತು ನಿರ್ಗಮನ ದ್ವಾರಗಳು ಕಡ್ಡಾಯವಾಗಿರಬೇಕೆಂಬ ನಿರ್ದೇಶನ ಹೊರಡಿಸಲಾಗಿದೆ.

ಮೇಲಿನ ನಿಯಮಗಳ ಉಲ್ಲಂಘನೆ ಪತ್ತೆಯಾದಲ್ಲಿ ಘಟಕಗಳ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಸ್ಪಷ್ಟಪಡಿಸಿದೆ.

ಕ್ರಿಸ್‌ಮಸ್ ಮತ್ತು ನ್ಯೂ ಇಯರ್‌ಗಳಂಥ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಗೋವಾ ರಾಜ್ಯಕ್ಕೆ ಆಗಮಿಸುವುದರಿಂದ, ಮದ್ಯ ಮಾರಾಟದ ಮೇಲೂ ನಿಯಂತ್ರಣವನ್ನು ಹೇರಲಾಗಿದೆ. ಅಗತ್ಯ ಅನುಮತಿ ಇಲ್ಲದ ಘಟಕಗಳಲ್ಲಿ ರಾತ್ರಿ 11 ಗಂಟೆಯ ನಂತರ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.