ಹೈದರಾಬಾದ್ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 19 ಮತ್ತು 20 ರಂದು ನಡೆದ ʼಟ್ರಾವೆಲ್‌ ಅಂಡ್‌ ಟೂರಿಸಂ ಫೇರ್‌ (TTF) ಹೈದರಾಬಾದ್ 2025ʼ ಕಾರ್ಯಕ್ರಮದಲ್ಲಿ ಗೋವಾ ಪ್ರವಾಸೋದ್ಯಮವು ಆಧ್ಯಾತ್ಮಿಕ ಪ್ರವಾಸೋದ್ಯಮ ಇನಿಷಿಯೇಟಿವ್‌ಗಾಗಿ ಪ್ರಶಸ್ತಿ ಪಡೆದುಕೊಂಡಿದೆ.

ಈ ಪ್ರಶಸ್ತಿಯನ್ನು ತೆಲಂಗಾಣ ಸರಕಾರದ ಯುವ ಪ್ರಗತಿ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್ ರವರು ಪ್ರದಾನ ಮಾಡಿದರು. ಗೋವಾ ಪ್ರವಾಸೋದ್ಯಮ ಇಲಾಖೆಯ ಸಹ ನಿರ್ದೇಶಕ ಜಯೇಶ್ ಕಾಂಕೋಂಕರ್, ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (GTDC) ಹಿರಿಯ ವ್ಯವಸ್ಥಾಪಕ ವಿಶೇಶ್ ಜಿ. ನಾಯಕ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಐಎ, ಸಚಿನ್ ಗಾಡ್ ಗೋವಾ ಪ್ರವಾಸೋದ್ಯಮ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

morjim beach

ಬಹುಮುಖ ಪ್ರವಾಸೋದ್ಯಮದ ಅನಾವರಣ

ಎರಡು ದಿನಗಳ ಕಾರ್ಯಕ್ರಮದಲ್ಲಿ ಗೋವಾ ಪ್ರವಾಸೋದ್ಯಮ ಇಲಾಖೆಯ ಸಹ ನಿರ್ದೇಶಕರು ಜಯೇಶ್ ಕಾಂಕೋಂಕರ್ ನೇತೃತ್ವದ ತಂಡವು ರಾಜ್ಯದ ಬಹುಮುಖ ಪ್ರವಾಸೋದ್ಯಮ ವೈವಿಧ್ಯವನ್ನು ಸಂದರ್ಶಕರಿಗೆ ಪರಿಚಯಿಸಿತು. ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಪುರಾತತ್ತ್ವ ಇಲಾಖೆಯ ಸಚಿವರು ಜುಪಲ್ಲಿ ಕೃಷ್ಣರಾವ್ ಮತ್ತು ತೆಲಂಗಾಣ ಪ್ರವಾಸೋದ್ಯಮದ ನಿರ್ದೇಶಕ ಹಾಗೂ ತೆಲಂಗಾಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಲ್ಲೂರು ಕ್ರಾಂತಿ, ಐಎಎಸ್ ಗೋವಾ ಪೆವಿಲಿಯನ್‌ಗೆ ಭೇಟಿ ನೀಡಿದರು. ಅಲ್ಲದೆ ಗೋವಾ ಪ್ರವಾಸೋದ್ಯಮದ ವೈವಿಧ್ಯಮಯ ಆಕರ್ಷಣೆಗಳನ್ನು ಮೆಚ್ಚಿ, ಅಲ್ಲಿನ ಸಂಸ್ಕೃತಿ, ಪರಂಪರೆ, ಸಾಹಸ, ಆಧ್ಯಾತ್ಮಿಕ ಅನುಭವಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

travel

ಈ ಸಂದರ್ಭ ಗೋವಾ ಪ್ರವಾಸೋದ್ಯಮ ಸಚಿವ ರೋಹನ್.ಎ.ಖಾಂಟೆ ಮಾತನಾಡಿ- “ ವೈವಿಧ್ಯ ಸಂಸ್ಕೃತಿ, ಪರಂಪರೆ, ಸಾಹಸ ಹಾಗೂ ಅನೂಹ್ಯ ಅನುಭವಗಳನ್ನು ನೀಡುವ ಮೂಲಕ ಗೋವಾ ಪ್ರವಾಸೋದ್ಯಮ ಪ್ರವಾಸಿಗರನ್ನು ಆಕರ್ಷಿಸುತ್ತದೆ.ಈ ನಿಟ್ಟಿನಲ್ಲಿ TTF ಹೈದರಾಬಾದ್‌ನಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಇನಿಷಿಯೇಟಿವ್‌ ಗೆ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ. ಈ ಪ್ರಶಸ್ತಿಯು ಪ್ರವಾಸಿಗರಿಗೆ ನೈಜ ಹಾಗೂ ಅರ್ಥಪೂರ್ಣ ಅನುಭವಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ಸಂದ ಗೌರವ. ಆಧ್ಯಾತ್ಮಿಕ ಪ್ರವಾಸೋದ್ಯಮವು ಗೋವಾ ಪ್ರವಾಸೋದ್ಯಮದ ವಿಸ್ತೃತ ದೃಷ್ಟಿಕೋನದ ಪ್ರಮುಖ ಅಂಶವಾಗಿದ್ದು, ಈ ಪ್ರಶಸ್ತಿ ನಮಗೆ ಇನ್ನಷ್ಟು ಉತ್ತಮ ಮತ್ತು ಸಮುದಾಯ ಕೇಂದ್ರಿತ ಕಾರ್ಯತಂತ್ರಗಳನ್ನು ರೂಪಿಸಲು ಪ್ರೇರಣೆಯಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.