ಬೆಂಗಳೂರು: ಅಂಜನಾದ್ರಿ ಬೆಟ್ಟವೂ ಸೇರಿದಂತೆ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಅನುಮೋದನೆ ನೀಡಲಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಇಂದು ಕಾವೇರಿ ನಿವಾಸದಲ್ಲಿ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಸಿದ್ದರಾಮಯ್ಯ ಅವರು ಅಂಜನಾದ್ರಿ ಬೆಟ್ಟವನ್ನು ಪ್ರವಾಸೋದ್ಯಮ‌ ಮತ್ತು ಪೌರಾಣಿಕ ಹಾಗೂ ಅಧ್ಯಾತ್ಮಿಕ ಮಹತ್ವವನ್ನು ತಿಳಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

cm meeting 1

ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.‌ ಯಾತ್ರಿಕರು ಉಳಿದುಕೊಳ್ಳಲು ಡಾರ್ಮೆಟರಿ ವ್ಯವಸ್ಥೆ , ಹಿರಿಯ ಭಕ್ತಾಧಿಗಳು ಬೆಟ್ಟವೇರಲು ಅನುಕೂಲವಾಗುವಂತೆ ಮೆಟ್ಟಿಲುಗಳ ವ್ಯವಸ್ಥೆ , ಸಮುದಾಯ ಭವನ ನಿರ್ಮಾಣ ಹಾಗೂ ಇತರ ಪ್ರವಾಸಿ ಸೌಲಭ್ಯಗಳು ಸೇರಿ ಕ್ಷೇತ್ರದ ಸುತ್ತ ಮುತ್ತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ.

ಹೀಗಾಗಿ ಕ್ಷೇತ್ರಕ್ಕೆ ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ 200 ಕೋಟಿ ರು. ಗಳ ಕಾಮಗಾರಿಗಳು ಮಂಜೂರಾಗಿದ್ದು, ಈವರೆಗೆ ಕಾಮಗಾರಿಗಳಿಗೆ 10 ಕೋಟಿ ರು.ಗಳನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಬಾಕಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಬೇಕಿರುತ್ತದೆ ಎಂಬುದಾಗಿ ಸಿದ್ಧರಾಮಯ್ಯ ನುಡಿದರು.

ಅಲ್ಲದೆ ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನಿನ ಕೊರತೆ ಇರುವುದರಿಂದ, ಪ್ರಸ್ತಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101 ಎಕರೆ 30 ಗುಂಟೆ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಾಗಿರುವ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಬೇಕಿರುತ್ತದೆ ಎಂದು ಸಿಎಂ ತಿಳಿಸಿದರು.

ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ NOC ನೀಡಬೇಕಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರಾದ ಎಚ್ ಕೆ ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.