ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ, ಮೈಸೂರು ಬಳಿಯಿರುವ ಅತಿದೊಡ್ಡ ಹಳೇ ಕಾರುಗಳ (ವಿಂಟೇಜ್ ಕಾರು) ಸಂಗ್ರಹಾಲಯದಲ್ಲಿ ಆಯೋಜಿಸಲಾಗಿದ್ದ 9 ದಿನಗಳ ‘ಪಯಣೋತ್ಸವ 2026’ ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಮುಕ್ತಾಯಗೊಂಡಿದೆ. ಅಕ್ಟೋಬರ್ 11 ರಿಂದ ಅಕ್ಟೋಬರ್ 19 ರವರೆಗೆ ಪ್ರತಿದಿನ ಸಂಗ್ರಹಾಲಯಕ್ಕೆ ಆಗಮಿಸಿದ ಸಹಸ್ರಾರು ವೀಕ್ಷಕರ ಮನರಂಜನೆಗಾಗಿ ವಿವಿಧ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೊದಲ ದಿನ ‘ಹೆಚ್ 2 ಒ’ (H2O) ಬ್ಯಾಂಡ್ ತಂಡದಿಂದ ಮೂಡಿಬಂದ ಮನಮೋಹಕ ಫ್ಯೂಷನ್ ವಾದ್ಯ ಸಂಗೀತ ಕಾರ್ಯಕ್ರಮವು ಕಾರು ಸಂಗ್ರಹಾಲಯದ ಗ್ರಾಂಡ್ ಎಂಟ್ರಿಯ ಮುಂಭಾಗದಲ್ಲಿ ಪ್ರೇಕ್ಷಕರನ್ನು ರಂಜಿಸಿತು. ಇದರೊಂದಿಗೆ ಕರ್ನಾಟಕದ ಕಲಾ ಸಂಸ್ಕೃತಿಯ ಸಂಕೇತಗಳಾದ ಡೊಳ್ಳು ಕುಣಿತ ಹಾಗೂ ವೀರಗಾಸೆ ಕಲಾವಿದರ ಅದ್ಭುತ ಪ್ರದರ್ಶನಕ್ಕೆ ಪ್ರೇಕ್ಷಕರು ತಾವೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

Untitled design - 2026-10-19T181954.056

ಉಳಿದ ದಿನಗಳಲ್ಲಿ ನುರಿತ ವಾದ್ಯಗಾರರಿಂದ ಕೀಬೋರ್ಡ್, ತಬಲಾ, ಸಿತಾರ್, ವೀಣೆ, ವಯೋಲಿನ್, ಕೊಳಲು ಹಾಗೂ ಶೆಹನಾಯಿ ಸೇರಿದಂತೆ ವಿವಿಧ ವಾದ್ಯಗಳ ನಾದ ವೈಭವವು ಸಂಗ್ರಹಾಲಯದ ಒಳಭಾಗದಲ್ಲಿದ್ದ ಅಪರೂಪದ ವಿಂಟೇಜ್ ಕಾರುಗಳ ಮಧ್ಯೆ ಮೊಳಗಿ ವೀಕ್ಷಕರ ಮನ ಸೂರೆಗೊಂಡಿತು. ಬೆಂಗಳೂರಿನ ಪ್ರಸಿದ್ಧ ‘ಸೌತ್ ಸೈಡ್ ನಿರ್ವಾಣ’ ಫ್ಯೂಷನ್ ಬ್ಯಾಂಡ್ ತಂಡ ಪ್ರಸ್ತುತಪಡಿಸಿದ ಅತ್ಯಾಕರ್ಷಕ ಸಂಗೀತ ರಸಸಂಜೆ ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

Untitled design - 2026-10-19T182008.780

ವಿಶೇಷ ಆಕರ್ಷಣೆಯಾಗಿದ್ದ ಸಿಡಿಮದ್ದು ಪ್ರದರ್ಶನ:

ಸದಾ ವೀಕ್ಷಕರಿಗೆ ಹೊಸತನವನ್ನು ನೀಡುವ ಉದ್ದೇಶದಿಂದ ಈ ಬಾರಿಯ ಪಯಣೋತ್ಸವದಲ್ಲಿ ಪಯಣ ಕಾರು ಸಂಗ್ರಹಾಲಯದ ಮುಂಭಾಗದಲ್ಲಿ ವರ್ಣರಂಜಿತ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಾವಿರಾರು ವಿಂಟೇಜ್ ಕಾರು ಪ್ರಿಯರು ಅಪರೂಪದ ಹಳೇ ಕಾರುಗಳ ಸೌಂದರ್ಯವನ್ನು ಆಸ್ವಾದಿಸುವುದರ ಜತೆಗೆ ಈ ಚಿತ್ತಾರಮಯ ಸಿಡಿಮದ್ದು ಪ್ರದರ್ಶನಕ್ಕೆ ಮನಸೋತರು.

ಸಾಂಸ್ಕೃತಿಕ ಹಾಗೂ ಕಲಾ ವೈಭವದೊಂದಿಗೆ 9 ದಿನಗಳ ಕಾಲ ನೆರವೇರಿದ ‘ಪಯಣೋತ್ಸವ 2026’ ಸಾರ್ವಜನಿಕರ ಅಪಾರ ಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ತೆರೆಕಂಡಿದೆ.