Monday, October 19, 2026
Monday, October 19, 2026

ಛಲಗಾತಿ ಪ್ರೇಮಾ ಭಟ್

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವುದು ಅಪರೂಪ. ಆದರೆ, ತೀರ್ಥಹಳ್ಳಿಯ ಸಾಮಾನ್ಯ ಕುಟುಂಬವೊಂದರಿಂದ ಬಂದು, ಬೆಂಗಳೂರಿನಲ್ಲಿ ಟ್ರಾವೆಲ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ, ಇಂದು 58 ದೇಶಗಳನ್ನು ಸುತ್ತಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿರುವ ಸಾಧಕಿ 'ಭಟ್ ಟ್ರಾವೆಲ್ಸ್'ನ ಸಂಸ್ಥಾಪಕಿ ಪ್ರೇಮಾ ಭಟ್. ಅವರ ಯಶಸ್ಸಿನ ಹಾದಿ ಹಾಗೂ ಸಂಸ್ಥೆಯ ಕಾರ್ಯವೈಖರಿಯ ಕುರಿತ ವಿಶೇಷಗಳು ಇಲ್ಲಿವೆ.

ಮೂಲತಃ ತೀರ್ಥಹಳ್ಳಿಯವರಾದ ಪ್ರೇಮಾ ಭಟ್ ಅವರ ಬದುಕು ಆರಂಭದಲ್ಲಿ ಸುಗಮವಾಗಿರಲಿಲ್ಲ. ತಮ್ಮ ಐದನೆಯ ತರಗತಿಯಿಂದಲೇ ಕೆಲಸ ಮಾಡಲು ಆರಂಭಿಸಿದ ಅವರು, ಗಾರ್ಮೆಂಟ್ಸ್‌ನಲ್ಲಿ ಶೂ ಗಮ್ ಹಾಕುವ ಕೆಲಸವನ್ನು ಸಹ ಮಾಡಿದ್ದರು. ಸರಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ, ಮದುವೆಯಾದ ಬಳಿಕ ಬೆಂಗಳೂರಿಗೆ ಬಂದ ಅವರು ಆಸ್ಪತ್ರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಗಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಕೆಲಸ ಮಾಡಿದ ನಂತರ, ಪಾಲುದಾರಿಕೆಯಲ್ಲಿ ಆರಂಭಿಸಿದ ಉದ್ಯಮ ಕೈಹಿಡಿಯಲಿಲ್ಲ. ಛಲ ಬಿಡದ ಅವರು 2019 ರ ಏಪ್ರಿಲ್ 14 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ವಂತವಾಗಿ 'ಭಟ್ ಟ್ರಾವೆಲ್ಸ್' ಸಂಸ್ಥೆಯನ್ನು ಆರಂಭಿಸಿದರು.

ಇದನ್ನೂ ಓದಿ: ಹೊಟೇಲ್‌ ಉದ್ಯಮ ಸವಾಲುಗಳ ಗೂಡು

ಕೊರೊನಾ ಸವಾಲು ಮತ್ತು ದೇಶೀಯ ಪ್ರವಾಸ

ಸಂಸ್ಥೆ ಆರಂಭಿಸಿದ ಕೇವಲ ಆರು ತಿಂಗಳಲ್ಲೇ ಕೊರೊನಾ ಎದುರಾಯಿತು. ಆರು ತಿಂಗಳು ಕಚೇರಿ ತೆರೆದಿದ್ದರೂ ವ್ಯಾಪಾರವಿಲ್ಲದೆ ಸಂಕಷ್ಟ ಎದುರಾಯಿತು. ಆದರೆ, ಕೊರೊನಾ ನಿಯಮಗಳು ಕೊಂಚ ಸಡಿಲಗೊಂಡಾಗ ಎದೆಗುಂದದೆ ಕುಂದಾಪುರ, ತೀರ್ಥಹಳ್ಳಿ ಸೇರಿದಂತೆ ದೇಶೀಯ ಪ್ರವಾಸಗಳನ್ನು ಆಯೋಜಿಸುವ ಮೂಲಕ ಸಂಸ್ಥೆಯನ್ನು ಉಳಿಸಿಕೊಂಡರು. ಕೊರೊನಾ ಸಂಪೂರ್ಣವಾಗಿ ಮುಕ್ತಾಯವಾದ ಮೇಲೆ, ತಮ್ಮ ಸಂಸ್ಥೆಯನ್ನು ಸಂಪೂರ್ಣವಾಗಿ 'ವಿದೇಶಿ ಪ್ರವಾಸ'ಗಳಿಗೆ ಮೀಸಲಿಟ್ಟರು.

ಕೇವಲ ಮೂವರ ತಂಡ, ಸಾಧನೆ ಅಪಾರ

'ಭಟ್ ಟ್ರಾವೆಲ್ಸ್' ಸಂಸ್ಥೆಯ ಬಹುದೊಡ್ಡ ವಿಶೇಷತೆಯೆಂದರೆ, ಇಲ್ಲಿ ಕೆಲಸ ಮಾಡುವುದು ಕೇವಲ ಮೂರು ಜನ. ತಿಂಗಳಿಗೆ ನಾಲ್ಕು ವಿದೇಶಿ ಪ್ರವಾಸಗಳನ್ನು ಆಯೋಜಿಸುವ ಈ ಸಂಸ್ಥೆಯ ಶೇ. 70 ರಷ್ಟು ಜವಾಬ್ದಾರಿಯನ್ನು (ಅಕೌಂಟ್ಸ್, ಸೇಲ್ಸ್, ಆಪರೇಷನ್ಸ್ ಹಾಗೂ ಟೂರ್ ಮ್ಯಾನೇಜರ್) ಪ್ರೇಮಾ ಭಟ್ ಅವರೇ ನಿಭಾಯಿಸುತ್ತಾರೆ. ಹತ್ತು ವರ್ಷಗಳಿಂದ ಇವರೊಟ್ಟಿಗೆ ಕೆಲಸ ಮಾಡುತ್ತಿರುವ ಸತೀಶ್ ಅವರು ಮ್ಯಾನೇಜರ್ ಆಗಿ ವೀಸಾ, ಟಿಕೆಟ್ ಹಾಗೂ ಟೂರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಾರೆ. ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿ, ಪ್ರೇಮಾ ಅವರಿಂದ ತರಬೇತಿ ಪಡೆದ ಬಸವರಾಜ್ ಅವರು ಇಂದು ಸಂಸ್ಥೆಯ ಮುಖ್ಯ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಬೆಳೆದಿದ್ದಾರೆ. ಇದು ಪ್ರೇಮಾ ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

Untitled design - 2026-10-19T153409.923

ಹಿರಿಯ ನಾಗರಿಕರಿಗೆ ಆದ್ಯತೆ

ಭಟ್ ಟ್ರಾವೆಲ್ಸ್ ಗ್ರಾಹಕರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರೇ ಇರುತ್ತಾರೆ. ʼನಮ್ಮ ಸಂಸ್ಥೆಗೆ ಬರುವ ಹಿರಿಯರನ್ನು ನಮ್ಮ ಸ್ವಂತ ತಂದೆ-ತಾಯಿಯಂತೆ ನೋಡಿಕೊಳ್ಳುತ್ತೇವೆʼ ಎನ್ನುವ ಪ್ರೇಮಾ ಅವರು, ಪ್ರವಾಸದ ಉದ್ದಕ್ಕೂ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಾರದಂತೆ ನಿಗಾವಹಿಸುತ್ತಾರೆ. ಇವರದು ಸಂಪೂರ್ಣ 'ಆಲ್ ಇನ್‌ಕ್ಲೂಸಿವ್' ಪ್ಯಾಕೇಜ್ ಆಗಿದ್ದು, ವಿಮಾನ ನಿಲ್ದಾಣದಿಂದ ಕರೆದೊಯ್ದು ಮರಳಿ ಬಿಡುವವರೆಗೆ ಮಧ್ಯೆ ಯಾವುದೇ ಹೆಚ್ಚುವರಿ ಹಣವನ್ನು ಗ್ರಾಹಕರಿಂದ ಕೇಳುವುದಿಲ್ಲ. ಗ್ರಾಹಕರ ಆದ್ಯತೆಗೆ ತಕ್ಕಂತೆ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಗುಣಮಟ್ಟದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇವರ ಈ ಅತ್ಯುತ್ತಮ ಸೇವೆಯಿಂದಾಗಿಯೇ ಗೂಗಲ್‌ನಲ್ಲಿ ಸಂಸ್ಥೆಯು 4.9 ರೇಟಿಂಗ್ ಪಡೆದಿದೆ ಹಾಗೂ ಮೌತ್ ಪಬ್ಲಿಸಿಟಿ ಮೂಲಕವೇ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.

ವೃತ್ತಿಪರತೆ ಹಾಗೂ ಬದ್ಧತೆ

ವ್ಯಾಪಾರದಲ್ಲಿ ಎಷ್ಟೇ ನಷ್ಟವಾದರೂ ಗ್ರಾಹಕರಿಗೆ ನೀಡಿದ ಮಾತಿಗೆ ತಪ್ಪುವುದಿಲ್ಲ ಎಂಬುದು ಪ್ರೇಮಾ ಅವರ ಸಿದ್ಧಾಂತ. ದುಬೈ ಪ್ರವಾಸವೊಂದರ ಸಂದರ್ಭದಲ್ಲಿ ವೀಸಾ ದರ ಏರಿಕೆಯಾಗಿ ಸಂಸ್ಥೆಗೆ ನಷ್ಟವಾದರೂ, ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯದೆ ತಾವೇ ಆ ನಷ್ಟವನ್ನು ಭರಿಸಿದ್ದರು. ಕೇವಲ 4-ಸ್ಟಾರ್ ಹೊಟೇಲ್‌ಗಳನ್ನು ಮಾತ್ರ ಗ್ರಾಹಕರಿಗೆ ಒದಗಿಸುವ ಇವರು, ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.

ವಿದೇಶಿ ಪ್ರವಾಸಗಳ ಬಜೆಟ್ ಬಗ್ಗೆ ಮಾತನಾಡಿರುವ ಅವರು, ʼಕೊರೊನಾ ಮುನ್ನ ಇದ್ದ ದರಗಳಿಗಿಂತ ಈಗ ಶೇ. 60 ರಷ್ಟು ದರಗಳು ಹೆಚ್ಚಾಗಿವೆ. ಆದರೂ, ಗುಣಮಟ್ಟದ ಸೇವೆಯ ಕಾರಣದಿಂದ ಗ್ರಾಹಕರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆʼ ಎನ್ನುತ್ತಾರೆ.

ಮುಂದಿನ ಗುರಿ

ಇದುವರೆಗೆ 58 ದೇಶಗಳನ್ನು ಸುತ್ತಿರುವ ಪ್ರೇಮಾ ಭಟ್, ಕೆಲವೊಂದು ದೇಶಗಳಿಗೆ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಸದ್ಯ ವಿದೇಶಿ ಪ್ರವಾಸಗಳಲ್ಲಿ ಹೆಚ್ಚು ಬ್ಯುಸಿಯಾಗಿರುವ ಇವರು, ಬಿಡುವಿನ ವೇಳೆಯಲ್ಲಿ ತಮ್ಮ ಹುಟ್ಟೂರಾದ ತೀರ್ಥಹಳ್ಳಿ ಸೇರಿದಂತೆ ಕರ್ನಾಟಕದ ಸ್ಥಳೀಯ ಪ್ರವಾಸೋದ್ಯಮವನ್ನು ಪ್ರಮೋಟ್ ಮಾಡುವ ಹಾಗೂ ಹೋಮ್‌‌ಸ್ಟೇ, ರೆಸಾರ್ಟ್‌ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಆಸಕ್ತಿಯನ್ನೂ ಹೊಂದಿದ್ದಾರೆ. ಯಾರು 'ಇವಳಿಂದ ಏನೂ ಸಾಧ್ಯವಿಲ್ಲ' ಎಂದು ಜರಿದಿದ್ದರೋ, ಅವರ ಮುಂದೆಯೇ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿರುವ ಪ್ರೇಮಾ ಭಟ್ ಅವರ ಸಾಧನೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ