ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಪ್ಪಿಸಲು ಮತ್ತು ತನ್ನ ಗ್ರಾಹಕರ ಜೀವ ರಕ್ಷಣೆಗೆ ಮುಂದಾಗಿರುವ ಜಿಯೋ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆ ಹೊಸ ಒಪ್ಪಂದವೊಂದಕ್ಕೆ ಸಹಿ ಮಾಡಿದೆ.ಇಬ್ಬರ ಸಹಭಾಗಿತ್ವದಲ್ಲಿ ಟೆಲಿಕಾಂ ಆಧಾರಿತ ಎಚ್ಚರಿಕೆ ವ್ಯವಸ್ಥೆಯನ್ನು ಜಾರಿಗೆ ತರಲು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಮೂಲಕ 4G ಮತ್ತು 5G ಬಳಸುವ ಗ್ರಾಹಕರಿಗೆ ರಸ್ತೆ ಸುರಕ್ಷತೆಯ ಮಾಹಿತಿಯನ್ನು ನೇರವಾಗಿ ತಲುಪಿಸಲು ನಿರ್ಧರಿಸಲಾಗಿದೆ.

ಇದರ ಪ್ರಕಾರ, ಟೆಲಿಕಾಂ ಆಧಾರಿತ ಎಚ್ಚರಿಕೆ ವ್ಯವಸ್ಥೆಯಿಂದಾಗಿ ಜಿಯೋ ಬಳಕೆ ಮಾಡುವ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಾಯಕಾರಿ ಸ್ಥಳಗಳನ್ನು ಸಮೀಪಿಸುತ್ತಿದ್ದಂತೆಯೇ ಅವರ ಫೋನ್‌ಗಳಿಗೆ ನೇರವಾಗಿ ಎಚ್ಚರಿಕೆಗಳು ಬರುತ್ತವೆ ಎನ್ನಲಾಗಿದೆ. ಹೆದ್ದಾರಿಗಳಲ್ಲಿ ಸಂಭವಿಸಬಹುದಾದ ಅವಘಡ ಬಗೆಗಿನ ಎಚ್ಚರಿಕೆಗಳನ್ನು ಎಸ್‌ಎಂಎಸ್, ವಾಟ್ಸಾಪ್ ಮತ್ತು ಹೈ-ಪ್ರಿಯಾರಿಟಿ ವಾಯ್ಸ್ ಕಾಲ್ ಮೂಲಕ ಕಳುಹಿಸಲಾಗುತ್ತದೆ. ವಿಶೇಷವೆಂದರೆ, ಡೇಟಾ ನೆಟ್‌ವರ್ಕ್ ಸರಿಯಾಗಿಲ್ಲದ ಪ್ರದೇಶಗಳಲ್ಲಿದ್ದರೂ ಈ ಎಚ್ಚರಿಕೆಗಳು ಬಳಕೆದಾರರನ್ನು ತಲುಪುವಂತೆ ವ್ಯವಸ್ಥೆ ಜಾರಿ ಮಾಡಲಾಗುತ್ತದೆ ಎನ್ನಲಾಗಿದೆ.

ಈ ವ್ಯವಸ್ಥೆಗೆ ರಸ್ತೆ ಬದಿಯಲ್ಲಿ ಹೊಸದಾಗಿ ಯಾವುದೇ ಹಾರ್ಡ್‌ವೇರ್ ಅಳವಡಿಸುವ ಅಗತ್ಯವಿಲ್ಲ. ಬದಲಾಗಿ, ಜಿಯೋದ ಅಸ್ತಿತ್ವದಲ್ಲಿರುವ ಟೆಲಿಕಾಂ ಟವರ್‌ಗಳ ನೆಟ್‌ವರ್ಕ್ ಬಳಸಿ ಇದನ್ನು ನಿರ್ವಹಿಸಲಾಗುತ್ತದೆ. ಸುರಕ್ಷತಾ ಎಚ್ಚರಿಕೆ ಸಂದೇಶವನ್ನು 'ರಾಜಮಾರ್ಗಯಾತ್ರಾ' ಆ್ಯಪ್ ಮತ್ತು '1033' ತುರ್ತು ಸಹಾಯವಾಣಿಯೊಂದಿಗೆ ಹಂತ ಹಂತವಾಗಿ ಲಿಂಕ್‌ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.