ಹಿಮಾಚಲ ಪ್ರದೇಶ ಸರ್ಕಾರವು ‘ಪರಿಸರ ಪ್ರವಾಸೋದ್ಯಮ ನೀತಿ’ ಅಡಿಯಲ್ಲಿ ಜಿಪ್‌ಲೈನ್ ಸಾಹಸ ಚಟುವಟಿಕೆಗಳಿಗೆ ಅಧಿಕೃತ ಮಾನ್ಯತೆ ನೀಡಿದೆ. ಈ ನಿರ್ಧಾರದಿಂದ ಸಾಹಸ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಕ್ಕಿದ್ದು, ವಿಶೇಷವಾಗಿ ಲಾಹೌಲ್–ಸ್ಪಿತಿ ಪ್ರದೇಶದ ಉದ್ಯಮಿಗಳು ಹಾಗೂ ಪ್ರವಾಸೋದ್ಯಮ ಹೂಡಿಕೆದಾರರು ಇದನ್ನು ಸ್ವಾಗತಿಸಿದ್ದಾರೆ.

ಲಾಹೌಲ್–ಸ್ಪಿತಿಯ ಶಾಸಕಿ ಅನುರಾಧಾ ರಾಣಾ ಅವರು ಮಾತನಾಡಿ, ಸರ್ಕಾರದ ಈ ಕ್ರಮವು ಸ್ಥಳೀಯ ಸಾಹಸ ಉದ್ಯಮಿಗಳಿಗೆ ದೊಡ್ಡ ನಿರಾಳತೆ ನೀಡಿದೆಯೆಂದು ಹೇಳಿದರು. ಇದುವರೆಗೆ ರಾಜ್ಯದಲ್ಲಿ ಜಿಪ್‌ಲೈನ್ ಕಾರ್ಯಾಚರಣೆಗೆ ಸ್ಪಷ್ಟ ನಿಯಮಾವಳಿ ಇರದ ಕಾರಣದಿಂದ ಭದ್ರತಾ ಅನುಮೋದನೆಗಳು ಹಾಗೂ ಪರವಾನಿಗೆಗಳಲ್ಲಿ ಅನೇಕ ಅಡಚಣೆಗಳು ಎದುರಾಗುತ್ತಿದ್ದವು.

Ziplining in Himachal Pradesh


ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ನೇತೃತ್ವದಲ್ಲಿ ಈ ಚಟುವಟಿಕೆಗಳನ್ನು ಪರಿಸರ ಪ್ರವಾಸೋದ್ಯಮ ನೀತಿಯಡಿ ತರಲು ಸರ್ಕಾರ ನಿರ್ಧರಿಸಿದ್ದು, ಇದು ಸುಸ್ಥಿರ ಸಾಹಸ ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಭದ್ರತೆಯ ನಡುವಣ ಸಮತೋಲನ ಸಾಧಿಸುವ ಪ್ರಮುಖ ಹೆಜ್ಜೆಯಾಗಿದೆ.

ಈ ನಿರ್ಧಾರದ ಬಳಿಕ ಅನೇಕ ಸ್ಥಳೀಯರು ಕಾನೂನುಬದ್ಧವಾಗಿ ಜಿಪ್‌ಲೈನ್ ಕಾರ್ಯಾರಂಭಕ್ಕೆ ಪ್ರಸ್ತಾಪಗಳನ್ನು ಸಲ್ಲಿಸಿದ್ದು, ಜಿಲ್ಲಾಡಳಿತವು ಅವುಗಳ ಪರಿಶೀಲನೆ ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಸರ್ಕಾರವು ಸ್ಥಳೀಯ ಯುವಕರಿಗೆ ಈ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಹಕಾರ ನೀಡುವುದಾಗಿ ತಿಳಿಸಿದೆ.

ಸರ್ಕಾರದ ಈ ನಡೆಯಿಂದ ಹಿಮಾಚಲ ಪ್ರದೇಶದ ಸಾಹಸ ಪ್ರವಾಸೋದ್ಯಮಕ್ಕೆ ಪುಷ್ಠಿ ದೊರೆತಿದ್ದು, ರಾಜ್ಯವು ಪ್ಯಾರಾಗ್ಲೈಡಿಂಗ್, ಟ್ರೆಕ್ಕಿಂಗ್, ನದಿ ರಾಫ್ಟಿಂಗ್ ಮತ್ತು ಜಿಪ್‌ಲೈನ್ ಮುಂತಾದ ಕ್ರೀಡೆಗಳ ಪ್ರಮುಖ ಕೇಂದ್ರವಾಗಿ ಬೆಳೆಯುವ ನಿರೀಕ್ಷೆಯಿದೆ.