ಏರ್ ಬಲೂನ್ ಸ್ಫೋಟ : ಬ್ರೆಜಿಲ್ನಲ್ಲಿ 8 ಮಂದಿ ಜೀವಂತ ಬಲಿ
ಬ್ರೆಜಿಲ್ ದೇಶದ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪೈಯಾ ಗ್ಯಾಂಡೇ ಎಂಬಲ್ಲಿ ಹಾಟ್ ಏರ್ ಬಲೂನ್ ದಿಢೀರ್ ಸ್ಪೋಟಗೊಂಡು 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬ್ರೆಸಿಲಿಯಾ: ಬ್ರೆಜಿಲ್‌ನ ಪ್ರವಾಸಿ ತಾಣವೊಂದರಲ್ಲಿ ಹಾಟ್ ಏರ್(ಬಿಸಿಗಾಳಿ) ಬಲೂನ್ ಆಗಸದಲ್ಲಿಯೇ ಸ್ಪೋಟಗೊಂಡ ಪರಿಣಾಮ 8 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಬ್ರೆಜಿಲ್ ದೇಶದ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪೈಯಾ ಗ್ಯಾಂಡೇ ಎಂಬಲ್ಲಿ 21 ಪ್ರವಾಸಿಗರನ್ನು ಅಗಸದಲ್ಲಿ ಸಂಚಾರಕ್ಕೆ ಶನಿವಾರ ಬೆಳಗ್ಗೆ 7ರ ವೇಳೆ ಕರೆದೊಯ್ದಿದ್ದ ಹಾಟ್ ಏರ್ ಬಲೂನ್ ದಿಢೀರ್ ಎಂಬಂತೆ ಸ್ಪೋಟಗೊಂಡಿದೆ. ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ. 13 ಮಂದಿ ಗಾಯಗೊಂಡಿದ್ದಾರೆ. ಬಲೂನ್ ಸ್ಫೋಟದ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಬಲೂನ್‌ಗೆ ಆಗಸದಲ್ಲಿ ಬೆಂಕಿ ಹೊತ್ತು ಕೊಂಡಿದ್ದು, ಸ್ಫೋಟವಾಗಿದೆ. ಸ್ಫೋಟ ಮತ್ತು ಬೆಂಕಿಯ ತೀವ್ರತೆಗೆ 8 ಪ್ರವಾಸಿಗರು ಸಾವನ್ನಪ್ಪಿದ್ದು, 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಟ್ ಏರ್ ಬಲೂನ್ ನ ಬುಟ್ಟಿಗೆ ಜೋಡಿಸಲಾಗಿದ್ದ ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ನ ಟಾರ್ಚ್‌ನಿಂದ ಕಿಡಿ ಹೊಮ್ಮಿ ಬಲೂನ್ ಬಟ್ಟೆಗೆ ಬೆಂಕಿ ತಾಗಿ ಶರವೇಗದಲ್ಲಿ ವ್ಯಾಪಿಸಿದೆ. ತಕ್ಷಣವೇ ಬಿಸಿಗಾಳಿ ಬಲೂನನ್ನು ಕೆಳಕ್ಕೆ ಇಳಿಸಲು ಚಾಲಕ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಾಗಲೇ ಬೆಂಕಿ ಇಡೀ ಬಲೂನಿಗೆ ವ್ಯಾಪಿಸಿ, ಸಿಲಿಂಡರ್ ಸ್ಪೋಟಗೊಂಡಿದೆ. 'ಕೆಳಕ್ಕೆ ಜಿಗಿಯಿರಿ” ಎಂದು ಯಾರೋ ಒಬ್ಬರು ಕೂಗಿದ್ದಾರೆ. ಕೆಲವರು ಬಲೂನ್‌ನ ಬುಟ್ಟಿಯಿಂದ ಕೆಳಕ್ಕೆ ಜಿಗಿದು ಗಾಯಗೊಂಡರೂ ಪ್ರಾಣ ಉಳಿಸಿಕೊಂಡಿದ್ದಾರೆ. ಜಿಗಿಯಲು ಬಯಪಟ್ಟವರು ಬಲೂನ್‌ನಲ್ಲೇ ಉಳಿದು ಜೀವಂತ ದಹನವಾಗಿದ್ದಾರೆ ಎಂದು ಗಾಯಾಳುವೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.