ಹುಬ್ಬಳ್ಳಿಯ ಆಕಾಶದಲ್ಲಿ ಮತ್ತೆ ಬಣ್ಣಬಣ್ಣದ ಗಾಳಿಪಟಗಳ ಹಾರಾಟದ ಸಂಭ್ರಮ ಕಣ್ತುಂಬಿಕೊಳ್ಳಲು ವೇದಿಕೆ ಸಜ್ಜಾಗಿದೆ. ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಫೆಬ್ರವರಿ 7 ಮತ್ತು 8, 2026 ರಂದು ಆಯೋಜಿಸಲಾಗುತ್ತಿರುವ ‘ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ–2026’ರ ಅಧಿಕೃತ ಲೋಗೋ ಹಾಗೂ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ.

ಈ ಉತ್ಸವವು ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಸಾಂಸ್ಕೃತಿಕ ಹಿರಿಮೆಯನ್ನು ರಾಷ್ಟ್ರಮಟ್ಟದಿಂದ ವಿಶ್ವಮಟ್ಟಕ್ಕೆ ಕೊಂಡೊಯ್ಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ದೇಶದ ವಿವಿಧ ರಾಜ್ಯಗಳ ಜತೆಗೆ ವಿದೇಶಗಳಿಂದಲೂ ಗಾಳಿಪಟ ಪ್ರೇಮಿಗಳು ಮತ್ತು ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಗಾಳಿಪಟಗಳ ಬಣ್ಣಬಣ್ಣದ ಹಾರಾಟದ ಮೂಲಕ ನಗರಕ್ಕೆ ವಿಶೇಷ ಆಕರ್ಷಣೆ ಒದಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Kite Festival at Hubballi

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ–2026ರ ಮೂಲಕ ಪ್ರವಾಸೋದ್ಯಮ, ಸಂಸ್ಕೃತಿ ಹಾಗೂ ಜನಪರ ಕಲೆಗೆ ಉತ್ತೇಜನ ನೀಡುವ ಉದ್ದೇಶವಿದ್ದು, ಈ ಸಂಭ್ರಮಕ್ಕೆ ಹುಬ್ಬಳ್ಳಿ ಸಂಪೂರ್ಣ ಸಜ್ಜಾಗಿದೆ ಎಂದು ಆಯೋಜಕರು ಹೇಳಿದರು.

ಲೋಗೋ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ಪಾಟೀಲ, ಉಪಮಹಾಪೌರರಾದ ಸಂತೋಷ ಚವ್ಹಾಣ ಗಣ್ಯರು ಉಪಸ್ಥಿತರಿದ್ದರು.

ಫೆಬ್ರವರಿ 7 ಮತ್ತು 8 ರಂದು ನಡೆಯಲಿರುವ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.