ವಿಮಾನ ಪ್ರಯಾಣದ ವೇಳೆ ಸಾಕುಪ್ರಾಣಿಗಳನ್ನು (ನಾಯಿ ಮತ್ತು ಬೆಕ್ಕು) ಕ್ಯಾಬಿನ್‌ನಲ್ಲಿ ಕರೆದುಕೊಂಡು ಹೋಗುವ ಪ್ರಯಾಣಿಕರಿಗಾಗಿ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (IATA) ಹೊಸ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಬುಕ್ಕಿಂಗ್‌ನಿಂದ ಗಮ್ಯಸ್ಥಾನ ತಲುಪುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಸುರಕ್ಷಿತ ಹಾಗೂ ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ.

Untitled design - 2026-07-16T143311.962

ಹೊಸ ಮಾರ್ಗಸೂಚಿಗಳ ಪ್ರಕಾರ, ಸಾಕುಪ್ರಾಣಿಗಳನ್ನು ಐಎಟಿಎ ಮಾನ್ಯತೆ ಪಡೆದ ಕ್ಯಾರಿಯರ್‌ನಲ್ಲಿ ಮಾತ್ರ ಸಾಗಿಸಬೇಕು. ಕ್ಯಾರಿಯರ್‌ನಲ್ಲಿ ಪ್ರಾಣಿಗೆ ನಿಲ್ಲಲು, ತಿರುಗಲು ಹಾಗೂ ಮಲಗಲು ಸಾಕಷ್ಟು ಜಾಗ, ಗಾಳಿಯಾಡುವ ವ್ಯವಸ್ಥೆ ಮತ್ತು ಸೋರಿಕೆಯಾಗದ ವಿನ್ಯಾಸ ಇರಬೇಕು. ಪ್ರಯಾಣಕ್ಕೂ ಮುನ್ನ ಸಾಕುಪ್ರಾಣಿಯನ್ನು ಕ್ಯಾರಿಯರ್‌ಗೆ ಹೊಂದಿಕೊಳ್ಳುವಂತೆ ತರಬೇತಿ ನೀಡುವುದು, ಹಾರಾಟಕ್ಕೂ ಮೊದಲು ಲಘು ಆಹಾರ ಮತ್ತು ಸಾಕಷ್ಟು ನೀರು ನೀಡುವುದು, ಪ್ರಯಾಣದ ವೇಳೆ ಕ್ಯಾರಿಯರ್‌ನಿಂದ ಹೊರತೆಗೆದಿಡದಂತೆ ಸೂಚಿಸಲಾಗಿದೆ.

ಐಎಟಿಎ ಸಮೀಕ್ಷೆಯ ಪ್ರಕಾರ, ಸಾಕುಪ್ರಾಣಿಗಳೊಂದಿಗೆ ವಿಮಾನ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ವಿಭಿನ್ನ ವಿಮಾನಯಾನ ಸಂಸ್ಥೆಗಳ ನಿಯಮಗಳಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಕರೂಪದ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅವು ಸಾಕುಪ್ರಾಣಿಗಳ ಸುರಕ್ಷತೆ, ಪ್ರಯಾಣಿಕರ ಅನುಕೂಲತೆ ಮತ್ತು ವಿಮಾನ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ನೆರವಾಗಲಿವೆ.