ಭಾರತ ಸರಕಾರವು 2017ರಲ್ಲಿ ಭಾರತೀಯ ನಾಗರಿಕರ ಯೆಮನ್‌ ಪ್ರವಾಸದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಧಿಕೃತವಾಗಿ ಹಿಂಪಡೆದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಯೆಮನ್‌ಗೆ ಸಂಬಂಧಿಸಿದ ಪ್ರವಾಸ ನಿರ್ಬಂಧಗಳನ್ನು ಮರುಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದು, ಜುಲೈ 10, 2026ರಂದು ಹೊಸ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

Untitled design (84)

ಆದರೆ, ನಿರ್ಬಂಧವನ್ನು ಹಿಂತೆಗೆದುಕೊಂಡಿದ್ದರೂ ಯೆಮನ್‌ನಲ್ಲಿನ ಭದ್ರತಾ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿರುವುದರಿಂದ ಭಾರತೀಯರು ಅನಗತ್ಯ ಪ್ರವಾಸವನ್ನು ತಪ್ಪಿಸುವಂತೆ ಸಚಿವಾಲಯ ಸಲಹೆ ನೀಡಿದೆ. ಅನಿವಾರ್ಯ ಕಾರಣಗಳಿಂದ ಪ್ರಯಾಣಿಸಬೇಕಾದರೆ ಸ್ಥಳೀಯ ಭದ್ರತಾ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ತೆರಳಬೇಕು ಹಾಗೂ ಸಂಘರ್ಷ ನಡೆಯುತ್ತಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಯೆಮನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ಎಚ್ಚರಿಕೆಯಿಂದ ಇರಬೇಕು, ಅನಗತ್ಯ ಸಂಚಾರವನ್ನು ಮಿತಿಗೊಳಿಸಬೇಕು ಹಾಗೂ ತುರ್ತು ಸಂದರ್ಭಗಳಲ್ಲಿ ನೆರವು ದೊರೆಯಲು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.