110 ಕಿಮೀ. ವೇಗದಲ್ಲಿ ಹೈಡ್ರೋಜನ್ ರೈಲು ಸಂಚಾರ
ಭಾರತೀಯ ರೈಲ್ವೇ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಗರಿಷ್ಠ ಗಂಟೆಗೆ 110 ಕಿಮೀ. ವೇಗದಲ್ಲಿ ಓಡಿಸುವ ಸಿದ್ಧತೆಯಲ್ಲಿ ತೊಡಗಿದೆ.
ಭಾರತೀಯ ರೈಲ್ವೇ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಗರಿಷ್ಠ ಗಂಟೆಗೆ 110 ಕಿಮೀ. ವೇಗದಲ್ಲಿ ಓಡಿಸುವ ಸಿದ್ಧತೆಯಲ್ಲಿ ತೊಡಗಿದೆ. ರೈಲ್ವೇ ಮಂಡಳಿ ಅಧ್ಯಕ್ಷ ಹಾಗೂ ಸಿಇಒ ಸತೀಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ ಗಂಟೆಗೆ 120 ಕಿಮೀ. ವೇಗದಲ್ಲಿ ರೈಲಿನ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದೆ. ಪ್ರಸ್ತುತ ಹೈಡ್ರೋಜನ್ ರೈಲಿನ ಕಾರ್ಯಾಚರಣಾ ವೇಗವನ್ನು ಗಂಟೆಗೆ 75 ಕಿಮೀ.ಗೆ ಮಿತಿಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ 110 ಕಿಮೀ. ವೇಗದಲ್ಲಿ ಸಂಚರಿಸುವ ಗುರಿ ಹೊಂದಲಾಗಿದೆ.
ಹೈಡ್ರೋಜನ್ ರೈಲಿಗೆ ಸೂಕ್ತ ಮಾರ್ಗಗಳನ್ನು ಗುರುತಿಸಲು ರೈಲ್ವೇ ಇಲಾಖೆ ವಿವಿಧ ಪಾಲುದಾರರೊಂದಿಗೆ ಚರ್ಚಿಸುತ್ತಿದೆ. ಹೈಡ್ರೋಜನ್ ಇಂಧನದ ನಿರಂತರ ಪೂರೈಕೆಗೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಜುಲೈ 17ರಂದು ಹರಿಯಾಣದ 89 ಕಿಮೀ. ಉದ್ದದ ಜಿಂದ್–ಸೋನಿಪತ್ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಆರಂಭಗೊಂಡಿತ್ತು. ಹೈಡ್ರೋಜನ್ ಮತ್ತು ಆಮ್ಲಜನಕದ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪಾದಿಸುವ ಈ ರೈಲು ಹೊಗೆ ಹಾಗೂ ಟೇಲ್‌ಪೈಪ್ ಕಾರ್ಬನ್ ಹೊರಸೂಸುವಿಕೆ ಇಲ್ಲದ ಕಾರಣ ಡೀಸೆಲ್ ರೈಲುಗಳಿಗೆ ಪರಿಸರ ಸ್ನೇಹಿ ಪರ್ಯಾಯವೆಂದು ಪರಿಗಣಿಸಲಾಗಿದೆ.