ರೈಲುಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಕಠಿಣ ನಿಯಮ ಜಾರಿಗೊಳಿಸಿದೆ. ರೈಲು ಕೋಚ್‌ಗಳು, ರೈಲ್ವೇ ನಿಲ್ದಾಣಗಳು ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ಕಸ ಎಸೆಯುವವರಿಗೆ ವಿಧಿಸಲಾಗುತ್ತಿದ್ದ ದಂಡವನ್ನು 500 ರು.ಗಳಿಂದ 1,000 ರು.ಗಳಿಗೆ ಹೆಚ್ಚಿಸಲಾಗಿದೆ. ಕೇಂದ್ರ ರೈಲ್ವೇ ಸಚಿವಾಲಯವು ಆಗಸ್ಟ್ 24ರಂದು ಹೊರಡಿಸಿದ ಅಧಿಸೂಚನೆಯೊಂದಿಗೆ ಪರಿಷ್ಕೃತ ನಿಯಮಗಳು ಜಾರಿಗೆ ಬಂದಿವೆ.

ನಿಗದಿತ ಸ್ಥಳಗಳ ಹೊರತು ರೈಲ್ವೇ ಆವರಣದಲ್ಲಿ ಕಸ ಹಾಕುವುದು, ಉಗುಳುವುದು, ಅಡುಗೆ ಮಾಡುವುದು, ಸ್ನಾನ ಮಾಡುವುದು, ಮೂತ್ರ ವಿಸರ್ಜನೆ ಅಥವಾ ಮಲ ವಿಸರ್ಜನೆ ಮಾಡುವುದು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ನೀಡುವುದು, ವಾಹನ, ಪಾತ್ರೆ ಅಥವಾ ಬಟ್ಟೆಗಳನ್ನು ತೊಳೆಯುವುದು ಹಾಗೂ ಸರಕುಗಳನ್ನು ಇಡುವುದು ದಂಡಕ್ಕೆ ಕಾರಣವಾಗಬಹುದು. ಅನುಮತಿಯಿಲ್ಲದೆ ರೈಲು ಕೋಚ್ ಅಥವಾ ರೈಲ್ವೇ ಆಸ್ತಿಗಳ ಮೇಲೆ ಪೋಸ್ಟರ್ ಅಂಟಿಸುವುದು, ಘೋಷಣೆ ಅಥವಾ ಸಂದೇಶ ಬರೆಯುವುದು ಹಾಗೂ ಚಿತ್ರ ಬಿಡಿಸುವುದಕ್ಕೂ ದಂಡ ವಿಧಿಸಬಹುದು.

ದಂಡವನ್ನು ಪಾವತಿಸಲು ನಿರಾಕರಿಸಿದರೆ ಪ್ರಕರಣ ನ್ಯಾಯಾಲಯಕ್ಕೆ ಹೋಗಬಹುದು. ಅಲ್ಲಿ ತಪ್ಪಿತಸ್ಥರಿಗೆ 2,000 ರು.ವರೆಗೆ ದಂಡ ವಿಧಿಸುವ ಅವಕಾಶವಿದೆ. ನಿಲ್ದಾಣ ಮಾಸ್ಟರ್, ಸ್ಟೇಷನ್ ಮ್ಯಾನೇಜರ್, ಟಿಕೆಟ್ ಕಲೆಕ್ಟರ್ ಸೇರಿದಂತೆ ರೈಲ್ವೇಯಿಂದ ಅಧಿಕಾರ ಪಡೆದ ಸಿಬ್ಬಂದಿ ದಂಡ ವಸೂಲಿ ಮಾಡಬಹುದು. ರೈಲ್ವೇ ಆವರಣವನ್ನು ಸ್ವಚ್ಛವಾಗಿಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.