ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಜಿಂದ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಪ್ರಯಾಣಿಕ ರೈಲುಗೆ ಚಾಲನೆ ನೀಡಲಿದ್ದಾರೆ. ಈ ರೈಲು ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದ್ದು, ಭಾರತದ ರೈಲ್ವೆ ಇತಿಹಾಸದಲ್ಲಿ ಪರಿಸರ ಸ್ನೇಹಿ ಸಾರಿಗೆಯತ್ತ ಮಹತ್ವದ ಹೆಜ್ಜೆಯಾಗಿದೆ.

Untitled design - 2026-07-17T105543.312

ಹೈಡ್ರೋಜನ್ ಫ್ಯೂಯೆಲ್ ಸೆಲ್ ತಂತ್ರಜ್ಞಾನವನ್ನು ಬಳಸುವ ಈ ರೈಲು ಡೀಸೆಲ್‌ನ ಅಗತ್ಯವಿಲ್ಲದೆ ಸ್ವತಃ ವಿದ್ಯುತ್ ಉತ್ಪಾದಿಸಿ ಸಂಚರಿಸುತ್ತದೆ. ಹೈಡ್ರೋಜನ್ ಮತ್ತು ಆಮ್ಲಜನಕದ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪತ್ತಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಾರ್ಬನ್ ಡೈಆಕ್ಸೈಡ್ ಹೊರಬರುವುದಿಲ್ಲ. ನೀರಿನ ಆವಿಯಷ್ಟೇ ಹೊರಬೀಳುವುದರಿಂದ ಇದು ಜೀರೊ ಎಮಿಷನ್‌ ಸಾರಿಗೆ ವ್ಯವಸ್ಥೆಯಾಗಿದೆ.

ಸುಮಾರು 89 ಕಿಲೋಮೀಟರ್ ಉದ್ದದ ಜಿಂದ್–ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು ಗರಿಷ್ಠ 110 ಕಿಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆಯಲ್ಲಿ ಸುಮಾರು 75 ಕಿಮೀ. ವೇಗದಲ್ಲಿ ಸಂಚರಿಸಲಿದೆ. ಎರಡು ಹೈಡ್ರೋಜನ್ ಚಾಲಿತ ಪವರ್ ಕಾರುಗಳು ಹಾಗೂ ಎಂಟು ಪ್ರಯಾಣಿಕ ಬೋಗಿಗಳನ್ನು ಒಳಗೊಂಡಿರುವ ಈ ರೈಲು ಸುಮಾರು 2,600 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ತವಾಂಗ್‌ನಲ್ಲಿ 14ನೆಯ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮಾರ್ಟ್

ರೈಲಿನಲ್ಲಿ ಹೈಡ್ರೋಜನ್ ಸೋರಿಕೆ, ಹೊಗೆ ಹಾಗೂ ಅತಿಯಾದ ಉಷ್ಣಾಂಶವನ್ನು ಪತ್ತೆಹಚ್ಚುವ ಸುಧಾರಿತ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಜಿಂದ್‌ನಲ್ಲಿ ವಿಶೇಷ ಹೈಡ್ರೋಜನ್ ಇಂಧನ ತುಂಬುವ ಕೇಂದ್ರವನ್ನೂ ಸ್ಥಾಪಿಸಲಾಗಿದೆ. ಈ ರೈಲಿನ ವಿನ್ಯಾಸ ಮತ್ತು ತಂತ್ರಜ್ಞಾನವನ್ನು 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ದೇಶದಲ್ಲೇ ಅಭಿವೃದ್ಧಿಪಡಿಸಲಾಗಿದೆ.

ಈ ಯೋಜನೆಯೊಂದಿಗೆ ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಚೀನಾ ಸೇರಿದಂತೆ ಹೈಡ್ರೋಜನ್ ರೈಲುಗಳನ್ನು ಅಭಿವೃದ್ಧಿಪಡಿಸಿರುವ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ. ಭಾರತೀಯ ರೈಲ್ವೆಯ ಹಸಿರು ಇಂಧನ ಮತ್ತು ಸುಸ್ಥಿರ ಸಾರಿಗೆ ಗುರಿ ಸಾಧನೆಯಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.