ಇಂಡಿಗೋ ವಿಮಾನಯಾನ ಸಂಸ್ಥೆ ಅಕ್ಟೋಬರ್ 27, 2026ರಿಂದ ಗುವಾಹಟಿ ಮತ್ತು ಬ್ಯಾಂಕಾಕ್ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸೇವೆ ಆರಂಭಿಸಲಿದೆ. ಇದು ಗುವಾಹಟಿಯಿಂದ ಇಂಡಿಗೋ ಆರಂಭಿಸುತ್ತಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಸೇವೆಯಾಗಿದ್ದು, ಈಶಾನ್ಯ ಭಾರತಕ್ಕೆ ನೇರ ಅಂತಾರಾಷ್ಟ್ರೀಯ ವಾಯು ಸಂಪರ್ಕ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ.

ಹೊಸ ಮಾರ್ಗವು ಈಶಾನ್ಯ ಭಾರತ ಮತ್ತು ಥೈಯ್ಲೆಂಡ್ ನಡುವಿನ ಪ್ರಯಾಣವನ್ನು ಸುಲಭಗೊಳಿಸುವುದರ ಜತೆಗೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಗುವಾಹಟಿಯನ್ನು ಆಗ್ನೇಯ ಏಷ್ಯಾ ಪ್ರವಾಸಕ್ಕೆ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶದ್ವಾರವಾಗಿ ಬೆಳೆಸಲು ಈ ಸೇವೆ ನೆರವಾಗಲಿದೆ.

ಪ್ರಸ್ತುತ ಇಂಡಿಗೋ ಬೆಂಗಳೂರು, ಭುವನೇಶ್ವರ, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬಯಿನಿಂದ ಬ್ಯಾಂಕಾಕ್‌ಗೆ ನೇರ ವಿಮಾನಗಳನ್ನು ನಿರ್ವಹಿಸುತ್ತಿದೆ. ಗುವಾಹಟಿ ಸೇವೆಯಿಂದ ಈಶಾನ್ಯ ಭಾಗದ ಪ್ರಯಾಣಿಕರು ಇತರ ಮಹಾನಗರಗಳಲ್ಲಿ ವಿಮಾನ ಬದಲಾಯಿಸುವ ಅಗತ್ಯವಿಲ್ಲದೆ ನೇರವಾಗಿ ಥೈಯ್ಲೆಂಡ್ ತಲುಪಬಹುದಾಗಿದೆ.

ಇದೇ ವೇಳೆ, ಅಕ್ಟೋಬರ್ 26ರಿಂದ ಗಯಾ–ಬ್ಯಾಂಕಾಕ್ ನಡುವೆಯೂ ನೇರ ವಿಮಾನ ಸೇವೆ ಆರಂಭಿಸಲು ಇಂಡಿಗೋ ಸಿದ್ಧವಾಗಿದೆ.