ಕೆಎಸ್‌ಆರ್‌ಟಿಸಿ: ಧಾರ್ಮಿಕ ಪ್ರವಾಸಕ್ಕೆ ಮತ್ತಷ್ಟು ಆಯ್ಕೆ
ಬೆಂಗಳೂರು ಟು ಸಿಗಂದೂರು ಪ್ಯಾಕೇಜ್ ನಾನ್ ಎಸಿ ಸ್ಲೀಪರ್ ಬಸ್ ಸೇವೆಯಲ್ಲಿ ಲಭ್ಯವಿದ್ದು, ವಾರದ ಎಲ್ಲ ದಿನಗಳು ಈ ಪ್ರವಾಸಕ್ಕೆ ಅವಕಾಶವಿರಲಿದೆ.
ಹಬ್ಬದ ತಿಂಗಳಿನಲ್ಲಿ ಮನೆ ಮಂದಿ ಎಲ್ಲರೂ ಸೇರಿ ಧಾರ್ಮಿಕ ಪ್ರವಾಸ ಮಾಡಬೇಕು ಎಂದುಕೊಂಡಿದ್ದರೆ ಕೆಎಸ್‌ಆರ್‌ಟಿಸಿ ನಿಮಗಾಗಿ ಬೆಂಗಳೂರು - ಘಾಟಿ ಸುಬ್ರಹ್ಮಣ್ಯ ಹಾಗೂ ಬೆಂಗಳೂರು ಟು ಸಿಗಂದೂರು ಎಂಬ ಎರಡು ಹೊಸ ಪ್ಯಾಕೇಜ್ ತಂದಿದೆ. ಬೆಂಗಳೂರು-ಘಾಟಿ ಸುಬ್ರಹ್ಮಣ್ಯ ಪ್ಯಾಕೇಜ್ ಮೂಲಕ ಗಂಗಾಧರೇಶ್ವರ ದೇವಸ್ಥಾನ, ಹೊನ್ನಮ್ಮ ದೇವಿ ದೇವಸ್ಥಾನ ಶಿವಗಂಗೆ, ಸಿದ್ದಗಂಗಾ ಕ್ಷೇತ್ರ, ಸಿದ್ದಗಂಗಾ ಮಠ, ಭೋಗ ನರಸಿಂಹ ದೇವಸ್ಥಾನ, ದೇವರಾಯನ ದುರ್ಗ, ಮಹಾಲಕ್ಷ್ಮಿದೇವಸ್ಥಾನ ಗೊರವನಹಳ್ಳಿ, ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶವಿರಲಿದೆ. ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಮಾತ್ರ ಈ ಧಾರ್ಮಿಕ ಪ್ರವಾಸವಿರಲಿದ್ದು, ವಯಸ್ಕರಿಗೆ 650 ರು. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 500 ರು. ಟಿಕೆಟ್ ದರವಿರಲಿದೆ. ಇದು ಒಂದು ದಿನದ ಪ್ರವಾಸವಾಗಿದ್ದು, ಬೆಂಗಳೂರಿನಿಂದ ಬೆಳಿಗ್ಗೆ 6.30 ಕ್ಕೆ ಹೊರಟು ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಮರಳಬಹುದು.

ಬೆಂಗಳೂರು ಟು ಸಿಗಂದೂರು ಪ್ಯಾಕೇಜ್ ನಾನ್ ಎಸಿ ಸ್ಲೀಪರ್ ಬಸ್ ಸೇವೆಯಲ್ಲಿ ಲಭ್ಯವಿದ್ದು, ವಾರದ ಎಲ್ಲ ದಿನಗಳು ಈ ಪ್ರವಾಸಕ್ಕೆ ಅವಕಾಶವಿರಲಿದೆ. ಬೆಂಗಳೂರಿನ ಮೆಜೆಸ್ಟಿಕ್‌ನಿಂದ ರಾತ್ರಿ 9.40 ಕ್ಕೆ ಪ್ರಯಾಣ ಪ್ರಾರಂಭವಾಗಿ ಬೆಳಿಗ್ಗೆ 6 ಗಂಟೆಗೆ ಸಿಗಂದೂರಿಗೆ ತಲುಪಬಹುದು. ಬೆಂಗಳೂರಿನಿಂದ ಸಿಗಂದೂರಿಗೆ ಹೋಗುವ ಮಾರ್ಗದಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ ಮೂಲಕ ಸಿಗಂದೂರಿಗೆ ತಲುಪುತ್ತೀರಿ. ಈ ಪ್ಯಾಕೇಜ್ ನಲ್ಲಿ ಪ್ರತಿ ವ್ಯಕ್ತಿಗೆ 950 ರು ವೆಚ್ಚವಾಗಲಿದೆ. ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟಿಗೆ ಮೂಲಕ ಬುಕಿಂಗ್ ಸಾಧ್ಯವಾಗಲಿದೆ.