ಲೆಮನ್ ಟ್ರೀ ಹೊಟೇಲ್ಸ್ ಲಿಮಿಟೆಡ್, ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣ ಮನಾಲಿಯಲ್ಲಿ ‘ಕೀಸ್ ಲೈಟ್ ಬೈ ಲೆಮನ್ ಟ್ರೀ ಹೊಟೇಲ್ಸ್’ ಆರಂಭಿಸಲು ಫ್ರಾಂಚೈಸಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಹೊಸ ಯೋಜನೆಯೊಂದಿಗೆ ಹಿಮಾಚಲ ಪ್ರದೇಶದಲ್ಲಿನ ಕಂಪನಿಯ ಹೊಟೇಲ್‌ಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ಕು ಹೊಟೇಲ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಏಳು ಅಭಿವೃದ್ಧಿ ಹಂತದಲ್ಲಿವೆ.

ಹಿಮಾಲಯದ ಸುಂದರ ಪರಿಸರದ ನಡುವೆ ನಿರ್ಮಾಣವಾಗಲಿರುವ ಈ ಹೊಟೇಲ್‌ನಲ್ಲಿ 24 ಸುಸಜ್ಜಿತ ಕೊಠಡಿಗಳು, ರೆಸ್ಟೋರೆಂಟ್, ಲೌಂಜ್, ಫಿಟ್ನೆಸ್ ಸೆಂಟರ್ ಹಾಗೂ ಅತಿಥಿಗಳ ಅನುಕೂಲಕ್ಕಾಗಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕುಟುಂಬಗಳು, ಪ್ರವಾಸಿಗರು ಹಾಗೂ ಸಣ್ಣ ಗುಂಪುಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಟೇಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಲೆಮನ್ ಟ್ರೀ ಹೊಟೇಲ್ಸ್ ಅಧ್ಯಕ್ಷ ವಿಶ್ವಪ್ರೀತ್ ಸಿಂಗ್ ಚೀಮಾ, ಮನಾಲಿ ವರ್ಷಪೂರ್ತಿ ದೇಶ- ವಿದೇಶದ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ತಾಣವಾಗಿದ್ದು, ಈ ಹೊಸ ಯೋಜನೆ ಕಂಪನಿಯ ವಿರಾಮ ಪ್ರವಾಸಿ ತಾಣಗಳಲ್ಲಿ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿದೆ ಎಂದು ತಿಳಿಸಿದ್ದಾರೆ. ಭುಂಟರ್ (ಕಲ್ಲು– ಮನಾಲಿ) ವಿಮಾನ ನಿಲ್ದಾಣದಿಂದ ಸುಮಾರು 56 ಕಿಮೀ. ಹಾಗೂ ಕೀರತ್‌ಪುರ ರೈಲು ನಿಲ್ದಾಣದಿಂದ ಸುಮಾರು 200 ಕಿಮೀ. ದೂರದಲ್ಲಿರುವ ಈ ಹೊಟೇಲ್ ಪ್ರವಾಸಿಗರಿಗೆ ಅನುಕೂಲಕರ ಸಂಪರ್ಕವನ್ನು ಒದಗಿಸಲಿದೆ.