ಜನಪ್ರಿಯ ತೆರೆದ ಮೃಗಾಲಯವಾಗಿರುವ ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಮೃಗಾಲಯದ ಪಾಲಕನಾಗಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿದೆ. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಿಯಾನ್ ರಂಗ್ಖರಸಾಮೀ ಸುರಕ್ಷತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಸಿಂಹದ ಆವರಣದೊಳಗೆ ಕಾಲಿಟ್ಟ ಕೂಡಲೇ ಸಿಂಹಗಳು ಅವರ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ನೂರಾರು ಪ್ರವಾಸಿಗರು ಈ ವೇಳೆ ಮೃಗಾಲಯದಲ್ಲಿದ್ದು, ಅವರು ಈ ಆಘಾತಕಾರಿ ದೃಶ್ಯಕ್ಕೆ ಸಾಕ್ಷಿಯಾಗಿದ್ದರು. ಕೆಲವರು ಸಿಂಹಗಳ ಗಮನವನ್ನು ಬೇರೆಡೆ ಸೆಳೆಯಲು ಹಾರ್ನ್ ಮಾಡಿದರೂ ಕೂಗಿದರೂ ರಂಗ್ಖರಸಾಮೀ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಘಟನೆ ಕುರಿತು ಪ್ರತಿಕ್ರಿಯಿಸಿರುವ ವನ್ಯಜೀವಿ ಇಲಾಖೆಯ ಮಹಾನಿರ್ದೇಶಕ ಅಟ್ಟಪೋಲ್ ಚರೋಯೆಂಚನ್ಸಾ, ಸಿಂಹಗಳಿಗೆ ಆಹಾರ ನೀಡುತ್ತಿರುವಾಗ ರಂಗ್ಖರಸಾಮೀ ಮೇಲೆ ದಾಳಿ ನಡೆದಿದೆ. ಅವುಗಳಲ್ಲಿ ಒಂದರ ಆರೋಗ್ಯ ಕೆಟ್ಟಿದ್ದು ದಾಳಿ ನಡೆಸಲು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ಹೇಳಿದೆ. ಪ್ರಾಣಿ ಹಕ್ಕುಗಳ ಗುಂಪಾದ ಪೆಟಾ, ಕಾಡು ಪ್ರಾಣಿಗಳನ್ನು ನಿರ್ವಹಿಸುವುದು ಅಪಾಯಕಾರಿಯಾಗಿರುವುದರಿಂದ ಸಿಂಹಗಳನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಒತ್ತಾಯಿಸಿದೆ.