ಮಲೇಷ್ಯಾದ ಲಾಂಗ್ಕಾವಿಯಲ್ಲಿ ಆಯೋಜಿಸಲಾಗಿದ್ದ ಲಾಂಗ್ಕಾವಿ ಇಂಟರ್‌ನ್ಯಾಷನಲ್ ಟೂರಿಸಂ ಎಂಗೇಜ್‌ಮೆಂಟ್ (LITE) 2025 ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಡಿಸೆಂಬರ್ 8ರಿಂದ 11ರವರೆಗೆ ನಡೆದ ಕಾರ್ಯಕ್ರಮವು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿತ್ತು.

ಲಾಂಗ್ಕಾವಿ ಡೆವಲಪ್‌ಮೆಂಟ್ ಅಥಾರಿಟಿ (LADA) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ನಾಯಕರು, ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಖರೀದಿದಾರರು ಹಾಗೂ ಪ್ರವಾಸೋದ್ಯಮ ಸೇವಾ ಪೂರೈಕೆದಾರರು ಭಾಗವಹಿಸಿದ್ದರು. ಈ ವೇದಿಕೆಯು ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಾಂಗ್ಕಾವಿ ಗುರುತಿಸಿಕೊಳ್ಳಲು ಸಹಕಾರಿಯಾಯಿತು.

LITE 2025


ಕಾರ್ಯಕ್ರಮದಲ್ಲಿ ಬ್ರೂನೈ, ಚೀನಾ, ಭಾರತ, ತೈವಾನ್ ಸೇರಿದಂತೆ ಹಲವು ದೇಶಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದು, ಲಾಂಗ್ಕಾವಿಯ ಸುಮಾರು 50 ಪ್ರವಾಸೋದ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುವ 100ಕ್ಕೂ ಹೆಚ್ಚು ಮಾರಾಟಗಾರರು ಮತ್ತು ಖರೀದಿದಾರರ ನಡುವೆ ವ್ಯವಹಾರ ಚರ್ಚೆಗಳು ನಡೆದವು.

ಭಾರತದಿಂದಲೂ ಸುಮಾರು 30 ಪ್ರವಾಸೋದ್ಯಮ ಖರೀದಿದಾರರು ಭಾಗವಹಿಸಿದ್ದು, ನವದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೊಯಂಬತ್ತೂರು, ತಿರುಚಿರಾಪಳ್ಳಿ, ಮಂಗಳೂರು ಮತ್ತು ಲುಧಿಯಾನ ಸೇರಿದಂತೆ ವಿವಿಧ ನಗರಗಳಿಂದ ಆಗಮಿಸಿದ್ದರು.

ಅಧಿಕಾರಿಗಳ ಮಾಹಿತಿ ಪ್ರಕಾರ, LITE ಕಾರ್ಯಕ್ರಮ ಆರಂಭದಿಂದಲೂ ಇದುವರೆಗೆ 140ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಖರೀದಿದಾರರನ್ನು 100ಕ್ಕೂ ಹೆಚ್ಚು ಲಾಂಗ್ಕಾವಿ ಪ್ರವಾಸೋದ್ಯಮ ಸೇವಾ ಪೂರೈಕೆದಾರರೊಂದಿಗೆ ಸಂಪರ್ಕ ಕಲ್ಪಿಸಿದ್ದು, RM 4.17 ಮಿಲಿಯನ್‌ಗಿಂತ ಹೆಚ್ಚು ಮೌಲ್ಯದ ವ್ಯಾಪಾರ ಒಪ್ಪಂದಗಳು ಈ ವೇದಿಕೆಯಿಂದ ಸಾಧ್ಯವಾಗಿವೆ.