ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ ಬನಿಹಾಲ್ ವರೆಗಿನ 111 ಕಿಲೋಮೀಟರ್ ಉದ್ದದ ಪ್ರಮುಖ ರೈಲು ಮಾರ್ಗದಲ್ಲಿ ರೈಲುಗಳ ಗರಿಷ್ಠ ಅನುಮತಿಸುವ ವೇಗವನ್ನು ಗಂಟೆಗೆ 75 ಕಿಮೀ. ನಿಂದ 100 ಕಿಮೀ.ಗೆ ಹೆಚ್ಚಿಸಲಾಗಿದೆ. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯಡಿ ಈ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಲಾಗಿದ್ದು, ಇದು ಕಾಶ್ಮೀರ ಕಣಿವೆಯ ರೈಲು ಸಂಪರ್ಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆಯ ವೈಷ್ಣೋದೇವಿ ದರ್ಶನ ಪ್ಯಾಕೇಜ್: ಪ್ರಯಾಣ ದರ, ಪ್ರಯಾಣದ ವಿವರ ಮತ್ತು ನೀವು ತಿಳಿದುಕೊಳ್ಳಬೇಕಾದದ್ದು

ಕೇಂದ್ರೀಯ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಮಹತ್ವದ ಬೆಳವಣಿಗೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಠಿಣ ಭೂಪ್ರದೇಶ ಹಾಗೂ ಸುರಂಗ ಮಾರ್ಗಗಳ ಮೂಲಕ ಹಾದುಹೋಗುವ ಈ ಹಾದಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಶಸ್ವಿಯಾಗಿ 100 ಕಿ.ಮೀ ವೇಗದ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಶ್ವದ ಅತ್ಯಂತ ಎತ್ತರದ ರೈಲ್ವೆ ಕಮಾನು ಸೇತುವೆಯಾದ ಚೆನಾಬ್ ಸೇತುವೆ (Chenab Bridge) ಹಾಗೂ ಮೊದಲ ಕೇಬಲ್-ಸ್ಟೇಡ್ ರೈಲ್ವೆ ಸೇತುವೆಯಾದ ಅಂಜಿ ಸೇತುವೆಯ (Anji Bridge) ಮೇಲೂ ಗಂಟೆಗೆ 100 ಕಿಮೀ. ವೇಗದಲ್ಲಿ ಯಶಸ್ವಿಯಾಗಿ ಸಂಚರಿಸಿ ಹೊಸ ದಾಖಲೆ ಬರೆದಿದೆ.

ವೇಗಮಿತಿ ಹೆಚ್ಚಳದಿಂದಾಗಿ ಈ ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆಯು ಮತ್ತಷ್ಟು ಸುಗಮವಾಗಲಿದ್ದು, ಪ್ರಯಾಣಿಕರಿಗೆ ಗಮ್ಯಸ್ಥಾನ ತಲುಪಲು ಕಡಿಮೆ ಸಮಯ ಹಿಡಿಯಲಿದೆ. ಜತೆಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಯುಎಸ್‌ಬಿಆರ್‌ಎಲ್ (USBRL) ಯೋಜನೆಯಡಿ ಕಾಶ್ಮೀರ ಕಣಿವೆಯನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಈ ವ್ಯವಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗಲಿದ್ದು, ರೈಲುಗಳ ವೇಗವನ್ನು ಇನ್ನೂ ಹೆಚ್ಚಿಸುವ ಚಿಂತನೆ ನಡೆಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.