ಮೇಘಾಲಯದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಮೇಘಾಲಯ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುತ್ತಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಆರಂಭವಾಗಲಿದ್ದು, ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವುದರೊಂದಿಗೆ ಸ್ಥಳೀಯ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಮೇಘಾಲಯ ಸರ್ಕಾರವು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುತ್ತಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಆರಂಭವಾಗಲಿದ್ದು, ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವುದರೊಂದಿಗೆ ಸ್ಥಳೀಯ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಮೇಘಾಲಯ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ (MPA) ಈ ಯೋಜನೆಯನ್ನು ಮುನ್ನಡೆಸುತ್ತಿದ್ದು, ರಾಜ್ಯದ ಮನಮೋಹಕ ಕಣಿವೆಗಳು, ಜಲಪಾತಗಳು ಮತ್ತು ಹಸಿರಿನ ಪರ್ವತಗಳನ್ನು ಆಕಾಶದಿಂದಲೇ ವೀಕ್ಷಿಸುವ ಅನುಭವವನ್ನು ಪ್ರವಾಸಿಗರಿಗೆ ಒದಗಿಸಲು ಸಜ್ಜಾಗಿದೆ. 2009ರಲ್ಲಿ ಆರಂಭವಾದ ಈ ಪ್ರಸ್ತಾಪವು ವಿವಿಧ ಆಡಳಿತಾತ್ಮಕ ಹಾಗೂ ಹಣಕಾಸು ಅಡೆತಡೆಗಳನ್ನು ಎದುರಿಸಿದ ನಂತರ ಈಗ ಕಾರ್ಯರೂಪ ಪಡೆಯುತ್ತಿದೆ.

ಪ್ಯಾರಾಗ್ಲೈಡಿಂಗ್‌ಗೆ ಸೂಕ್ತವಾದ ಪರ್ವತಗಳು, ನದಿ ಕಣಿವೆಗಳು ಮತ್ತು ನಿರಂತರ ಗಾಳಿಯ ಹರಿವಿನಿಂದ ಮೇಘಾಲಯ ರಾಜ್ಯವು ಸಾಹಸ ಕ್ರೀಡೆಗೆ ಅತ್ಯುತ್ತಮ ತಾಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಪ್ಲೆಂಗ್ ಮತ್ತು ಮಾವ್ಲಿಂಡೆಪ್ ಪ್ರದೇಶಗಳನ್ನು ಪ್ರಾಥಮಿಕ ಹಾರಾಟ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಸ್ಥಳಗಳು ತರಬೇತಿ ಪಡೆಯಲು ಮತ್ತು ಆಸಕ್ತರು ಹಾರಾಟ ನಡೆಸಲು ಸೂಕ್ತ ಪ್ರದೇಶಗಳಾಗಿವೆ.
ಶಿಲ್ಲಾಂಗ್‌ನಲ್ಲಿ ವಿಶೇಷ ಸ್ಪರ್ಧೆ ಆಯೋಜಿಸುವ ಮೂಲಕ ರಾಜ್ಯದಲ್ಲಿ ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನು ಪ್ರಾರಂಭಿಸಲು ಸರ್ಕಾರವು ಸಿದ್ಧತೆ ನಡೆಸಿದೆ. ಈ ಸ್ಪರ್ಧೆಯಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆಯ ಪೈಲಟ್‌ಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಮೇಘಾಲಯ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ ಸ್ಥಳೀಯ ಯುವಕರಿಗೆ ಪೈಲಟ್ ಮತ್ತು ತರಬೇತುದಾರರಾಗಲು ವಿಶೇಷ ತರಬೇತಿ ನೀಡುವ ಯೋಜನೆಯನ್ನೂ ಹೊಂದಿದೆ. ಗ್ಲೈಡರ್ ಹ್ಯಾಂಡ್ಲಿಂಗ್, ಗಾಳಿಯ ದಿಕ್ಕನ್ನು ಗುರುತಿಸುವುದು, ಭದ್ರತಾ ಕ್ರಮಗಳು ಮತ್ತು ತುರ್ತು ನಿರ್ವಹಣೆ ಕುರಿತ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಇದರ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಹೊರಗಿನ ಆಪರೇಟರ್‌ಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.
MPA ಸುರಕ್ಷತೆಯನ್ನು ಪ್ರಮುಖ ಅಂಶವನ್ನಾಗಿ ಪರಿಗಣಿಸಿದ್ದು, ಪ್ರತಿ ಹಾರಾಟಕ್ಕೂ ಪ್ರಮಾಣಿತ ಸಾಧನಗಳ ಬಳಕೆ ಮತ್ತು ತರಬೇತಿಗೊಂಡ ಪೈಲಟ್‌ಗಳಿಗೆ ಮಾತ್ರ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಳು, ಭದ್ರತಾ ಉಪಕರಣಗಳು ಹಾಗೂ ತುರ್ತು ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ.
ಈ ಯೋಜನೆಯಿಂದ ಮೇಘಾಲಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ಸಿಗಲಿದೆ. ತನ್ನ ನಯನ ಮನೋಹರ ತಾಣಗಳಿಗೆ ಸಾಹಸಿ ಪ್ರವಾಸಿಗರನ್ನು ಸೆಳೆಯುವ ಮೂಲಕ ರಾಜ್ಯದ ಹೋಂಸ್ಟೇಗಳು, ಹೋಟೆಲ್‌ಗಳು ಹಾಗೂ ಸಾರಿಗೆ ಉದ್ಯಮಗಳಿಗೆ ಆರ್ಥಿಕ ಚೈತನ್ಯ ತುಂಬುವತ್ತ ರಾಜ್ಯ ಹೆಜ್ಜೆಯನ್ನಿರಿಸಿದೆ.