ಹುಲಿ ಸಂರಕ್ಷಿತಾರಣ್ಯ ಧಾಮವಾಗಲಿದೆಯಾ ಎಂಎಂ ಹಿಲ್ಸ್ ?
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸಿ. ರೇ ಅವರು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಚರ್ಚೆಯ ನಂತರ ಹುಲಿ ಸಂರಕ್ಷಿತಾರಣ್ಯವನ್ನಾಗಿಸಲು ಇರುವ ಸಾಧಕ-ಬಾಧಕಗಳ ಕುರಿತು ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆದು ಆ ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಕರ್ನಾಟಕದ ಮಲೆ ಮಹದೇಶ್ವರ (ಎಂ.ಎಂ.) ಬೆಟ್ಟ ವನ್ಯ ಜೀವಿಧಾಮವನ್ನು ಶೀಘ್ರದಲ್ಲೇ ಹುಲಿ ಸಂರಕ್ಷಿತಾರಣ್ಯವೆಂದು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ರಚಿಸಲಾದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಈ ಪ್ರದೇಶವನ್ನು ಹುಲಿ ಸಂರಕ್ಷಿತಾರಣ್ಯವಾಗಿ ಪರಿಗಣಿಸಲು ಶಿಫಾರಸು ಮಾಡಿದೆ.
ಎಂ.ಎಂ. ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಿಸುವ ಬೇಡಿಕೆ, ಇತ್ತೀಚೆಗೆ ಈ ಪ್ರದೇಶದಲ್ಲಿ ಐದು ಹುಲಿಗಳು ಸತ್ತ ನಂತರ ಬಲವಾಗಿತ್ತು. ಐದು ಹುಲಿಗಳ ಸಾವಿನ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಸಿಇಸಿಯನ್ನು ರಚಿಸಿತ್ತು. ಸಮಿತಿಯು ಅಧ್ಯಯನದ ಬಳಿಕ, ಎಂ.ಎಂ. ಬೆಟ್ಟ ವನ್ಯಜೀವಿಧಾಮವು ಹುಲಿ ಸಂರಕ್ಷಿತಾರಣ್ಯವಾಗಲು ಅಗತ್ಯವಿರುವ ಎಲ್ಲ ಮಾನದಂಡಗಳನ್ನು ಹೊಂದಿದೆ ಎಂಬ ಅಭಿಪ್ರಾಯವನ್ನು ಪಟ್ಟಿದೆ.
ಆದರೆ, ಈ ಘೋಷಣೆಯನ್ನು ಅಧಿಕೃತಗೊಳಿಸುವ ಮೊದಲು ಸ್ಥಳೀಯ ನಿವಾಸಿಗಳು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ. ಇದಕ್ಕಾಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸಿ. ರೇ ಅವರು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಚರ್ಚೆಯ ನಂತರ ಹುಲಿ ಸಂರಕ್ಷಿತಾರಣ್ಯವನ್ನಾಗಿಸಲು ಇರುವ ಸಾಧಕ-ಬಾಧಕಗಳ ಕುರಿತು ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಚರ್ಚೆ ನಡೆಸಿ ಅನುಮೋದನೆ ಪಡೆದು ಆ ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೆ, ಅವಶ್ಯವಿದ್ದರೆ ಸಚಿವ ಸಂಪುಟದಲ್ಲೂ ವಿಷಯ ಮಂಡಿಸಿ ಅನುಮೋದನೆ ಪಡೆಯುವುದು ಇಲಾಖೆ ಅಧಿಕಾರಿಗಳ ಯೋಜನೆಯಾಗಿದೆ. ಈ ಪ್ರಸ್ತಾವನೆ ಅನುಮೋದನೆಗೊಂಡರೆ, ಕರ್ನಾಟಕದ ವನ್ಯಜೀವಿ ಸಂರಕ್ಷಣಾ ಕಾರ್ಯಕ್ಕೆ ಮತ್ತಷ್ಟು ಬಲ ದೊರೆತು, ಈ ಪ್ರದೇಶದ ಜೈವ ವೈವಿಧ್ಯತೆಯ ರಕ್ಷಣೆಗೆ ಸಹಕಾರಿಯಾಗಲಿದೆ.