ದೇಶದ ಹಲವು ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಪ್ರವಾಸಿಗರ ಪ್ರಯಾಣ ಯೋಜನೆಗಳಿಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಆಗಸ್ಟ್ 13ರವರೆಗೆ ವಿವಿಧ ರಾಜ್ಯಗಳಲ್ಲಿ ಭಾರಿ, ಅತಿ ಭಾರಿ ಹಾಗೂ ಕೆಲವೆಡೆ ಅತ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಜಲಾವೃತ, ಪ್ರವಾಹ ಮತ್ತು ಹಠಾತ್ ಪ್ರವಾಹದ ಅಪಾಯ ಹೆಚ್ಚಾಗಿದೆ.

ದೆಹಲಿ- ಎನ್‌ಸಿಆರ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು- ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಹಿಮಾಲಯದ ಪ್ರವಾಸಿ ತಾಣಗಳಲ್ಲಿ ಭಾರಿ ಮಳೆಯೊಂದಿಗೆ ಭೂಕುಸಿತ, ಮಣ್ಣು ಕುಸಿತ ಮತ್ತು ರಸ್ತೆ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

1 (13)

ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿಯೂ ಮುಂಗಾರು ಚುರುಕಾಗಿರಲಿದೆ. ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ಪ್ರದೇಶಗಳಲ್ಲಿ ಆಗಸ್ಟ್ 8ರಿಂದ 13ರವರೆಗೆ ವ್ಯಾಪಕ ಮಳೆಯ ಮುನ್ಸೂಚನೆ ಇದೆ.

ಕರ್ನಾಟಕ ಮತ್ತು ಕೇರಳಕ್ಕೂ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ, ಕೇರಳ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಕೆಲವು ಭಾಗಗಳಲ್ಲಿ ಕಡಿಮೆದಿಂದ ಮಧ್ಯಮ ಮಟ್ಟದ ಹಠಾತ್ ಪ್ರವಾಹದ ಅಪಾಯವನ್ನೂ IMD ಗುರುತಿಸಿದೆ.

ಪ್ರವಾಸಿಗರು ಪ್ರಯಾಣಕ್ಕೂ ಮುನ್ನ ಹವಾಮಾನ ಮುನ್ಸೂಚನೆ ಪರಿಶೀಲಿಸಿ, ಮಳೆಪೀಡಿತ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ IMD ಸೂಚಿಸಿದೆ. ರಸ್ತೆ, ರೈಲು ಮತ್ತು ಹೆಲಿಕಾಪ್ಟರ್ ಸೇವೆಗಳ ಮೇಲೂ ಮಳೆಯ ಪರಿಣಾಮ ಬೀರುವ ಸಾಧ್ಯತೆಯಿದೆ.