ಪ್ರವಾಸೋದ್ಯಮವನ್ನು ವರ್ಷಪೂರ್ತಿ ಸಕ್ರಿಯವಾಗಿರಿಸುವತ್ತ ಹಿಮಾಚಲದ ಚಿತ್ತ...
“ಮಳೆಗಾಲದ ಪ್ರವಾಸೋದ್ಯಮ ಸರ್ಕ್ಯೂಟ್” ಎಂಬ ಹೊಸ ಯೋಜನೆಯಡಿ ನೀರು ಆಧಾರಿತ ಮತ್ತು ಪ್ರಕೃತಿ ಆಧಾರಿತ ತಾಣಗಳನ್ನು ಅಭಿವೃದ್ಧಿಪಡಿಸಲು ಹಿಮಾಚಲ ಸರ್ಕಾರ ಮುಂದಾಗಿದೆ. ಪ್ರಸ್ತುತ, ಬಿಲಾಸ್ಪುರ, ಕೋಲ್ ಆಣೆಕಟ್ಟು, ಕಾಂಗ್ರಾ ಮತ್ತು ಸುಂದರನಗರ ಪ್ರದೇಶಗಳಲ್ಲಿ ಮಾನವ ನಿರ್ಮಿತ ಸರೋವರಗಳು ವರ್ಷಪೂರ್ತಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಈ ಕಾರಣದಿಂದ, ಕಯಾಕಿಂಗ್, ಕ್ಯಾನೋಯಿಂಗ್, ಬೋಟಿಂಗ್, ರಾಫ್ಟಿಂಗ್ ಮುಂತಾದ ಸಾಹಸ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ.
ಮಳೆಗಾಲದಲ್ಲಿ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ ಕಡಿಮೆಯಾಗುವ ಸಾಧ್ಯತೆ ಇದ್ದು, ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಇಲ್ಲಿನ ಸರ್ಕಾರ ಸೂಕ್ತವಾದ ನೀತಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಏಕೆಂದರೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅಲ್ಲಿನ ಆದಾಯ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳು ಕುಂಠಿತವಾಗುತ್ತವೆ. ಈ ಕುರಿತು ಮಾತನಾಡಿರುವ ತಾಂತ್ರಿಕ ಶಿಕ್ಷಣ ಸಚಿವ ರಾಜೇಶ್ ಧರ್ಮಣಿಯವರು, “ಮಳೆಗಾಲದ ಪ್ರವಾಸೋದ್ಯಮ ಸರ್ಕ್ಯೂಟ್” ಎಂಬ ಹೊಸ ಯೋಜನೆಯಡಿ ನೀರು ಮತ್ತು ಪ್ರಕೃತಿ ಆಧಾರಿತ ತಾಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ, ಬಿಲಾಸ್ಪುರ, ಕೋಲ್ ಆಣೆಕಟ್ಟು, ಕಾಂಗ್ರಾ ಮತ್ತು ಸುಂದರನಗರ ಪ್ರದೇಶಗಳಲ್ಲಿ ಮಾನವ ನಿರ್ಮಿತ ಸರೋವರಗಳು ವರ್ಷಪೂರ್ತಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುತ್ತವೆ. ಈ ಕಾರಣದಿಂದ, ಕಯಾಕಿಂಗ್, ಕ್ಯಾನೋಯಿಂಗ್, ಬೋಟಿಂಗ್, ರಾಫ್ಟಿಂಗ್ ಮುಂತಾದ ಸಾಹಸ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಇದೆ ಎಂದು ಧರ್ಮಣಿ ಹೇಳಿದರು.

ಈ ಯೋಜನೆಯ ಮುಖ್ಯ ಉದ್ದೇಶ ಪ್ರವಾಸೋದ್ಯಮವನ್ನು ವರ್ಷಪೂರ್ತಿ ಸಕ್ರಿಯಗೊಳಿಸುವುದು ಹಾಗೂ ಸ್ಥಳೀಯ ಸಮುದಾಯದ ಜೀವನೋಪಾಯವನ್ನು ಬಲಪಡಿಸುವುದಾಗಿದೆ. ಇದಕ್ಕೆ ಸಂಬಂಧಿಸಿದಂತೆ, ನವೆಂಬರ್ 21ರಿಂದ 23ರವರೆಗೆ ಬಿಲಾಸ್ಪುರದ ಗೋಬಿಂದ್ ಸಾಗರ್ ಸರೋವರದಲ್ಲಿ “ಬಿಲಾಸ್ಪುರ ಅಕ್ವಾ ಫೆಸ್ಟ್-2025” ಆಯೋಜಿಸಲಾಗುತ್ತಿದೆ. ಲುಹ್ನು ನಿಂದ ಮಂಡಿ ಭರಾರಿವರೆಗಿನ ಸರೋವರ ಪ್ರದೇಶದಲ್ಲಿ ನಡೆಯುವ ಈ ಉತ್ಸವದಲ್ಲಿ ಕಯಾಕಿಂಗ್, ಸ್ಟಿಲ್ ವಾಟರ್ ರಾಫ್ಟಿಂಗ್ ಮುಂತಾದ ಚಟುವಟಿಕೆಗಳು ಪ್ರವಾಸಿಗರನ್ನು ಆಕರ್ಷಿಸಲಿವೆ.
ಮಳೆಗಾಲದ ಭೂಕುಸಿತ, ಭಾರೀ ಮಳೆ ಮತ್ತು ಅಪಾಯದ ಕಾರಣಗಳಿಂದ ಪ್ರವಾಸೋದ್ಯಮದಲ್ಲಿ ಉಂಟಾಗುವ ಕುಸಿತವನ್ನು ಸಮತೋಲನಗೊಳಿಸಲು ಈ ಹೊಸ ಯೋಜನೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರದ ಈ ಹೊಸ ಕ್ರಮವು ಪ್ರವಾಸೋದ್ಯಮ ವಲಯದಲ್ಲಿ ನೂತನ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ.
 
                         
                     
                                            
                                             
                                                
                                                