ನಾಗಾಲ್ಯಾಂಡ್ ಸರಕಾರವು ಪ್ರಸಿದ್ಧ ಹಾರ್ನ್‌ಬಿಲ್ ಫೆಸ್ಟಿವಲ್ ನಿಮಿತ್ತ ಪ್ರವಾಸಿಗರಿಗೆ ಸುಲಭ ಸಂಚಾರ ಮತ್ತು ವಿಭಿನ್ನ ಅನುಭವ ಒದಗಿಸುವ ಉದ್ದೇಶದಿಂದ ಹೆಲಿಕಾಪ್ಟರ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ. ಈ ಸೇವೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು Thumby Aviation Pvt. Ltd. ಒಟ್ಟಿಗೆ ಜಾರಿಗೆ ತಂದಿವೆ.

ಈ ಹೆಲಿಕಾಪ್ಟರ್‌ ರೈಡ್‌ ಕೊಹಿಮಾದ ಲೇರಿ ಹೆಲಿಪ್ಯಾಡ್‌ನಿಂದ ಕಾರ್ಯನಿರ್ವಹಿಸಲಿದ್ದು, ಪ್ರವಾಸಿಗರಿಗೆ ಪಟ್ಟಣದ ಸುತ್ತಲಿನ ಸುಂದರ ನೈಸರ್ಗಿಕ ಪ್ರದೇಶಗಳನ್ನು ಆಕಾಶದಿಂದ ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ವಿಶೇಷವಾಗಿ ದ್ಜುಕೋ ಕಣಿವೆಯ ಹಸಿರು ಗುಡ್ಡಗಳನ್ನು, ಕೊಹಿಮಾ ಸುತ್ತಲಿನ ಬೆಟ್ಟ-ಪರ್ವತಗಳು ಮತ್ತು ವರ್ಣರಂಜಿತ ಹಾರ್ನ್‌ಬಿಲ್‌ ಫೆಸ್ಟಿವಲ್‌ನ ಕಾರ್ಯಕ್ರಮಗಳನ್ನು ಪ್ರವಾಸಿಗರು ಎತ್ತರ ಪ್ರದೇಶದಿಂದ ಕಂಡು ಆನಂದಿಸಬಹುದಾಗಿದೆ.

Hornbill festival Nagaland


ಹಬ್ಬದ ಅವಧಿಯಲ್ಲಿ ಕೊಹಿಮಾ, ಕಿಗ್ವೆಮಾ ಮತ್ತು ಡಿಮಾಪುರ ಹೋಲಿಪೋರ್ಟ್‌ಗಳಿಂದ ಈ ಹೆಲಿಕಾಪ್ಟರ್‌ ಸೇವೆಯನ್ನು ಕಲ್ಪಿಸಲಾಗುತ್ತದೆ. ಪ್ರವಾಸಿಗರು ಕಡಿಮೆ ಸಮಯದಲ್ಲಿ ಪ್ರಮುಖ ಸ್ಥಳಗಳ ನಡುವೆ ಸಂಚಾರ ನಡೆಸಲು ಇದು ಉಪಯುಕ್ತವಾಗಲಿದ್ದು, ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಉತ್ಸಾಹವನ್ನು ತರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇವೆಯ ದರವನ್ನು ಪ್ರವಾಸಿಗರಿಗೆ ಅನುಕೂಲಕರವಾಗುವಂತೆ ನಿಗದಿಪಡಿಸಿರುವುದರಿಂದ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಹೆಲಿಕಾಪ್ಟರ್ ಸವಾರಿ ಹಾರ್ನ್‌ಬಿಲ್ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಪ್ರವಾಸೋದ್ಯಮ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.