NCRTC(National Capital Region Transport Corporation) ಯು ದೆಹಲಿ-ಮೀರಟ್‌ ಮಾರ್ಗವಾಗಿ ಸಂಚರಿಸುವ ಹೈ ಸ್ಪೀಡ್‌ ʼನಮೋ ಭಾರತʼ ರೈಲುಗಳನ್ನು ಇದೀಗ ಖಾಸಗಿ ಕಾರ್ಯಕ್ರಮಗಳು, ಫೊಟೋಶೂಟ್‌ಗಳು ಮತ್ತು ಸೃಜನಾತ್ಮಕ ಚಿತ್ರೀಕರಣಗಳಿಗೆ ಬಾಡಿಗೆಗೆ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಪ್ರವಾಸೋದ್ಯಮ ಮತ್ತು ಕ್ರಿಯೇಟಿವ್ ಕ್ಷೇತ್ರಗಳಿಗೆ ಬಳಸುವ ನೂತನ ಪ್ರಯತ್ನವಾಗಿದ್ದು, ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡಲಿದೆ.

ಹೊಸ ನೀತಿಯಡಿ ರೈಲು ಕೋಚ್‌ಗಳನ್ನು, ರೈಲ್ವೆ ಸ್ಟೇಷನ್‌ಗಳನ್ನು ಮತ್ತು ದುಹಾಯಿ ಡೆಪೊದಲ್ಲಿರುವ ಮಾಕ್‌ಅಪ್ ಕೋಚ್‌ನ್ನು ಬುಕ್ ಮಾಡಿಕೊಳ್ಳುವ ಅವಕಾಶವನ್ನು NCRTC ನೀಡಿದೆ. ಈ ವ್ಯವಸ್ಥೆಯನ್ನು ಪ್ರೀ-ವೆಡ್ಡಿಂಗ್ ಫೊಟೋಶೂಟ್‌ಗಳು, ಕಾರ್ಯಕ್ರಮಗಳು, ಜಾಹೀರಾತು ಚಿತ್ರೀಕರಣ, ಡಿಜಿಟಲ್ ಕಂಟೆಂಟ್ ನಿರ್ಮಾಣ ಮುಂತಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ.

ಬುಕಿಂಗ್‌ಗಳಿಗೆ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಅವಕಾಶವಿದ್ದು, ಶುಲ್ಕ ಪ್ರತಿ ಗಂಟೆಗೆ 5,000 ರು. ನಿಂದ ಆರಂಭವಾಗುತ್ತದೆ. ರೈಲು ಕೋಚ್‌ಗಳಿಗೆ ಯಾವುದೇ ಹಾನಿ ಉಂಟಾಗದಂತೆ ಸರಳ ಅಲಂಕಾರಕ್ಕೆ ಮಾತ್ರ ಅನುಮತಿ ಇರುತ್ತದೆ ಮತ್ತು ಕಾರ್ಯಕ್ರಮದ ಸಮಯದಲ್ಲಿ NCRTC ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮೇಲ್ವಿಚಾರಣೆಗಾಗಿ ಹಾಜರಿರುತ್ತಾರೆ.