ಮುನ್ನಾರ್‌ಗೆ ಬರಲಿದೆ ನೀಲಕುರುಂಜಿ ಕಾಲ
12 ವರ್ಷಗಳಿಗೊಮ್ಮೆ ಅರಳಿ, ಪ್ರವಾಸಿಗರನ್ನು ಆಕರ್ಷಿಸುವ ನೀಲಕುರುಂಜಿ ಕಾಲ ಸದ್ಯ ಮುನ್ನಾರ್ ನಲ್ಲಿ ಪ್ರಾರಂಭವಾಗುತ್ತಿದೆ. ಈಗಾಗಲೇ ಸ್ವಲ್ಪ ಪ್ರಮಾಣದಲ್ಲಷ್ಟೇ ಅರಳಿರುವ ಈ ಹೂವು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣವಾಗಿ ಅರಳುವ ಮೂಲಕ ಹೂವಿನ ಲೋಕವನ್ನೇ ಸೃಷ್ಟಿ ಮಾಡಲಿದೆ.
ಕೇರಳದ ಮುನ್ನಾರ್ ನಲ್ಲಿ ಈಗ ನೀಲಕುರುಂಜಿಯ ಕಾಲ. ವೈಜ್ಞಾನಿಕವಾಗಿ ಸ್ಟ್ರೋಬಿಲಾಂಥಸ್ ಕುಂಥಿಯಾನಾ ಎಂದು ಕರೆಯಲ್ಪಡುವ ಈ ನೇರಳೆ ಬಣ್ಣದ ನೀಲಕುರುಂಜಿ ಹೂವುಗಳು, ಸುಮಾರು 1,500 ಮೀಟರ್ ಎತ್ತರದಲ್ಲಿ ಬೆಳೆಯುವ ಸಸ್ಯಗಳಾಗಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ಅರಳುತ್ತದೆ. ಮುನ್ನಾರ್‌ನ ಇಕಾನಗರ, ಗ್ರಹಾಂಸ್ ಲ್ಯಾಂಡ್ ಮತ್ತು ಮಟ್ಟುಪಟ್ಟಿಯಲ್ಲಿ ಸುಮಾರು 3,000 ಹೆಕ್ಟೇರ್‌ಗಳಷ್ಟು ಜಾಗದಲ್ಲಿ ಈ ಅಪರೂಪದ ಹೂವುಗಳು ಬಿಡಲು ಪ್ರಾರಂಭವಾಗಿದ್ದು, ಶೀಘ್ರದಲ್ಲೇ ಇನ್ನಷ್ಟು ಹೂವುಗಳು ಅರಳಿ ಪ್ರವಾಸಿಗರನ್ನು ಸೆಳೆಯಲಿವೆ.

ಕಳೆದ ಬಾರಿ 2018ರಲ್ಲಿ ಪೂರ್ಣ ಪ್ರಮಾಣದಲ್ಲಿ ನೀಲಕುರುಂಜಿ ಹೂವು ಅರಳಿದ್ದರೂ ಪ್ರವಾಹದ ಕಾರಣದಿಂದಾಗಿ ಈ ಸುಂದರ ಹೂವುಗಳನ್ನು ಪ್ರವಾಸಿಗರು ನೇರವಾಗಿ ನೋಡುವ ಅವಕಾಶದಿಂದ ವಂಚಿತರಾಗಿದ್ದರು ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಅದಕ್ಕಾಗಿಯೇ ಈ ಬಾರಿ ಕುರುಂಜಿ ಅಭಯಾರಣ್ಯದಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇರಳ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ನೀಲಕುರುಂಜಿ ಹೂವುಗಳನ್ನು ವೀಕ್ಷಿಸಲು ಮುನ್ನಾರ್‌ಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ರೀತಿಯ ಆತಿಥ್ಯ ವ್ಯವಸ್ಥೆಗಳನ್ನು ಸಜ್ಜುಗೊಳಿಸುವ ಬಗ್ಗೆಯೂ ಸರ್ಕಾರ ನಿರ್ಧಾರ ಕೈಗೊಂಡಿದೆ. ಬೆಳಿಗ್ಗೆ 7.30 ರಿಂದ ಸಂಜೆ 4 ರವರೆ ನೀಲಕುರುಂಜಿ ಹೂವಿನ ಲೋಕದಲ್ಲಿ ವಿಹರಿಸಲು ಪ್ರವಾಸಿಗರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಅಲ್ಲದೆ 120 ರು.ಪ್ರವೇಶ ಶುಲ್ಕವನ್ನೂ ಸರ್ಕಾರ ನಿಗದಿ ಮಾಡಿದೆ.