ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ಸಂಸ್ಥೆಯು ತನ್ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಇಥಿಯೋಪಿಯನ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ಟೆವೊಲ್ಡೆ ಗೆಬ್ರೆಮರಿಯಂ ಅವರನ್ನು ನೇಮಕ ಮಾಡಿದೆ. ಕ್ಯಾಂಪ್ಬೆಲ್ ವಿಲ್ಸನ್ ಅವರ ಸ್ಥಾನಕ್ಕೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹೊಸ ಸಿಇಒಗಾಗಿ ನಡೆದ ಹುಡುಕಾಟಕ್ಕೆ ಈ ನೇಮಕದೊಂದಿಗೆ ತೆರೆ ಬಿದ್ದಿದೆ.

ಟೆವೊಲ್ಡೆ ಅವರಿಗೆ ವಿಮಾನಯಾನ ಕ್ಷೇತ್ರದಲ್ಲಿ 36 ವರ್ಷಕ್ಕೂ ಅಧಿಕ ಅನುಭವವಿದ್ದು, ಇಥಿಯೋಪಿಯನ್ ಏರ್‌ಲೈನ್ಸ್ ಅನ್ನು ಆಫ್ರಿಕದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ವಿಮಾನ ಸಂಸ್ಥೆಯಾಗಿ ಬೆಳೆಸಿದ ಸಾಧನೆ ಅವರದ್ದಾಗಿದೆ. ಕೋವಿಡ್-19 ಸಾಂಕ್ರಾಮಿಕದಂಥ ಸಂಕಷ್ಟದ ಅವಧಿಯಲ್ಲೂ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವವಿದೆ. ಏರ್ ಇಂಡಿಯಾ ಇತ್ತೀಚಿನ ಆರ್ಥಿಕ ನಷ್ಟ, ಕಾರ್ಯಾಚರಣಾ ಸವಾಲುಗಳು ಹಾಗೂ ನಿಯಂತ್ರಣ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಪುನಶ್ಚೇತನಕ್ಕೆ ಅವರ ನಾಯಕತ್ವ ಮಹತ್ವದ್ದಾಗಲಿದೆ ಎಂದು ಟಾಟಾ ಸಮೂಹ ವಿಶ್ವಾಸ ವ್ಯಕ್ತಪಡಿಸಿದೆ.