ಲಡಾಖ್ ಯುನಿಯನ್ ಟೆರಿಟರಿಯಲ್ಲಿ ಸಂಚಾರ ಸೌಲಭ್ಯ ಮತ್ತು ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ E-3 ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಾಗಿದೆ. ಈ ಹೊಸ ಸೇವೆಯ ಮೂಲಕ ಲಡಾಖ್‌ನ ದುರ್ಗಮ ಪ್ರದೇಶಗಳಿಗೆ ಸುರಕ್ಷಿತವಾಗಿ ಹಾಗೂ ವೇಗವಾಗಿ ತಲುಪಬಹುದು.

ಹೆಲಿಕಾಪ್ಟರ್‌ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಲಡಾಖ್‌ ಲೆಫ್ಟಿನೆಂಟ್ ಗವರ್ನರ್, ಲಡಾಖ್‌ನ ಭೌಗೋಳಿಕ ಸ್ಥಿತಿ ಹಾಗೂ ಹವಾಮಾನ ವೈಪರಿತ್ಯದ ಕಾರಣ ರಸ್ತೆ ಸಂಪರ್ಕವು ಹಲವಾರು ತಿಂಗಳುಗಳ ಕಾಲ ಕಡಿತಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಹೆಲಿಕಾಪ್ಟರ್ ಸೇವೆಗಳು ಜನರಿಗೆ ಅವಶ್ಯಕವಾಗಿದ್ದು, ಈ ಯೋಜನೆ ಸ್ಥಳೀಯರ ದೈನಂದಿನ ಜೀವನಕ್ಕೆ ಹಾಗೂ ಪ್ರವಾಸಿಗರ ಸಂಚಾರಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.

E-3 Helicopters to operate in Ladakh


ಈ E-3 ಹೆಲಿಕಾಪ್ಟರ್ ಸೇವೆಯಡಿಯಲ್ಲಿ ಲೇಹ್‌ನಿಂದ ಕಾರ್ಗಿಲ್, ಪದೂಮ್, ಲಿಂಗ್ಶೆಡ್, ನಿಯೆರಕ್, ಡಿಸ್ಕಿಟ್, ತುರುಟುಕ್ ಸೇರಿದಂತೆ ಹಲವು ದೂರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ಪ್ರವಾಸಿಗರು ಕೂಡ ಕಡಿಮೆ ಸಮಯದಲ್ಲಿ ಸುಲಭವಾಗಿ ವಿವಿಧ ಪ್ರವಾಸಿ ತಾಣಗಳನ್ನು ತಲುಪಲು ಸಾಧ್ಯವಾಗಲಿದೆ.

ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ಸೇವೆ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ವೈದ್ಯಕೀಯ ತುರ್ತು ಪರಿಸ್ಥಿತಿಗಳು, ರಕ್ಷಣಾ ಕಾರ್ಯಾಚರಣೆಗಳು ಮತ್ತು ಅಗತ್ಯ ವಸ್ತುಗಳ ಸರಬರಾಜಿಗೂ ಅತ್ಯಂತ ಉಪಯುಕ್ತವಾಗಲಿದೆ. ವಿಶೇಷವಾಗಿ ಚಳಿಗಾಲದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಾಗ ಈ ಹೆಲಿಕಾಪ್ಟರ್ ಸೇವೆಗಳು ಜೀವನಾಡಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಹೆಲಿಕಾಪ್ಟರ್ ಸೇವೆಗಳ ಟಿಕೆಟ್‌ಗಳನ್ನು ಸಾರ್ವಜನಿಕರು ಆನ್‌ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.