ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೂತನ ಕಾರ್ಯದರ್ಶಿಯನ್ನಾಗಿ ಡಾ. ತ್ರಿಲೋಕ್‌ ಚಂದ್ರ ಕೆ.ವಿ. ಅವರನ್ನು ನೇಮಿಸಲಾಗಿದೆ. ಈ ಹಿಂದೆ, ಸಲ್ಮಾ ಕೆ. ಫಹೀಂ ಅವರು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸ್ಥಾನಕ್ಕೆ ತ್ರಿಲೋಕ್‌ ಚಂದ್ರ ಅವರನ್ನು ನೇಮಿಸಲಾಗಿದೆಯೆಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯವು ಈ ಸಂದರ್ಭದಲ್ಲಿ ಸುಸ್ಥಿರ, ಸಮುದಾಯ ಕೇಂದ್ರಿತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಪರ್ಕವನ್ನು ಬಲಪಡಿಸಲು ಪ್ರಯತ್ನಿಸುತ್ತಿರುವುದರಿಂದ ಈ ನೇಮಕಾತಿ ಹೆಚ್ಚಿನ ಮಹತ್ವ ಪಡೆದಿದೆ.

Trilok Chandra

ಐ.ಎ.ಎಸ್.‌ ಅಧಿಕಾರಿಯಾದ ಡಾ. ತ್ರಿಲೋಕ್‌ ಚಂದ್ರ ಕೆ.ವಿ. ಅವರು ಜಿಲ್ಲೆ ಹಾಗೂ ನಗರ ಮಟ್ಟದ ಆಡಳಿತ ಕ್ಷೇತ್ರದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಈಗ ಅವರು ರಾಜ್ಯದ ಪ್ರವಾಸೋದ್ಯಮ ನೀತಿಗಳ ಅನುಷ್ಠಾನ, ತಾಣಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಹಿತಾಸಕ್ತರ ಜತೆಗಿನ ಸಂಯೋಜನೆ ಸೇರಿದಂತೆ ಪ್ರಮುಖ ಕಾರ್ಯಗಳಿಗೆ ನೇತೃತ್ವ ವಹಿಸಲಿದ್ದಾರೆ.

ತ್ರಿಲೋಕ್ ಚಂದ್ರ ಅವರ ನೇಮಕಾತಿಯಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಹೊಸ ತಾಣಗಳ ಪ್ರಚಾರ, ಪ್ರವಾಸಿ ಕ್ಷೇತ್ರದ ಖಾಸಗಿ ಉದ್ಯಮಿಗಳೊಂದಿಗಿನ ಸಹಭಾಗಿತ್ವ ಮತ್ತಷ್ಟು ಬಲ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.