ಓಮಾನ್‌ನ ಸುಹಾರ್ ಪಟ್ಟಣದಲ್ಲಿ ಆಯೋಜಿಸಲಾದ ʼಸುಸ್ಥಿರ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರʼ ಎಂಬ ವಿಷಯದಡಿ ನಡೆದ ಚರ್ಚೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿರ್ಧಾರ ಕೈಗೊಳ್ಳಲಾಯಿತು. ಆರ್ಥಿಕ ಸಚಿವ ಡಾ. ಸೈದ್ ಮೊಹಮ್ಮದ್ ಅಲ್ ಸಖ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮಹಿಳೆಯರ ಉದ್ಯಮಶೀಲತೆ, ಸಮಗ್ರ ಅಭಿವೃದ್ದಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯ ಬಗ್ಗೆ ಚರ್ಚಿಸಲಾಯಿತು.

women empowerment


ಈ ವೇದಿಕೆ ಮಹಿಳೆಯರಿಗೆ ತಮ್ಮ ಯೋಜನೆಗಳನ್ನು ಪರಿಚಯಿಸಲು, ಸವಾಲುಗಳ ಬಗ್ಗೆ ಚರ್ಚಿಸಲು ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಹುಡುಕಲು ಉಪಯುಕ್ತವೆಂದು ಉಲ್ಲೇಖಿಸಬಹುದು. ಸಾಹಸ ಪ್ರವಾಸೋದ್ಯಮ, ಪಾರಂಪರಿಕ ಪ್ರವಾಸೋದ್ಯಮ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ವಿನೂತನ ವಿಚಾರಗಳನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Oman


“ಮಹಿಳೆಯರ ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳಿಗೆ ಆರ್ಥಿಕ ಹಾಗೂ ಕಾನೂನು ಸಹಕಾರ” ಮತ್ತು “ಮಹಿಳೆಯರ ಪ್ರವಾಸೋದ್ಯಮ ಯೋಜನೆಗಳನ್ನು ಪ್ರಚಾರಗೊಳಿಸುವಲ್ಲಿ ರಾಷ್ಟ್ರೀಯ ಮಾಧ್ಯಮದ ಪಾತ್ರ” ಎಂಬ ಎರಡು ಪ್ರಮುಖ ವಿಚಾರಗಳ ಚರ್ಚೆಗಳು ಸಭೆಯ ಕೇಂದ್ರಬಿಂದುವಾಗಿದ್ದವು. ಸರ್ಕಾರ ಮತ್ತು ಖಾಸಗಿ ವಲಯಗಳ ಸಹಕಾರದ ಮೂಲಕ ಮಹಿಳೆಯರಿಗೆ ಸಾಲ, ಹೂಡಿಕೆ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಮಾಧ್ಯಮವು ಮಹಿಳಾ ಉದ್ಯಮಿಗಳ ಕೃತಿಗಳನ್ನು ಬೆಳಕಿಗೆ ತರುವ ಮೂಲಕ ಅವರ ಪ್ರೇರಣಾದಾಯಕ ಕಥೆಗಳು ವ್ಯಾಪಕವಾಗಿ ತಲುಪುವಂತೆ ಮಾಡಲು ಬೇಕಾದ ಕಾರ್ಯಸೂಚಿಗಳ ಬಗ್ಗೆಯೂ ಚರ್ಚಿಸಲಾಯಿತು.

ಓಮಾನ್‌ನ ಈ ನಡೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಕೇವಲ ಉದ್ಯಮಶೀಲತೆಯ ಮಟ್ಟದಲ್ಲಿ ಮಾತ್ರವಲ್ಲದೆ ರಾಷ್ಟ್ರದ ಆರ್ಥಿಕ ಪ್ರಗತಿಯ ಪ್ರಮುಖ ಘಟ್ಟವಾಗಿಸುವತ್ತ ಇಟ್ಟ ದಿಟ್ಟ ಹೆಜ್ಜೆಯಾಗಿದೆ.